
ನವದೆಹಲಿ: SpiceJet ವಿಮಾನಯಾನ ಸಂಸ್ಥೆಯು ಬಾಕಿ ಹಣವನ್ನು ಪಾವತಿಸದ ಕಾರಣ ಬಾಂಗ್ಲಾದೇಶವು ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಬಾಂಗ್ಲಾದೇಶದ ವಾಯುಪ್ರದೇಶವು ಬಳಕೆಗೆ ಲಭ್ಯವಿಲ್ಲದ ಕಾರಣ, ವಿಮಾನಯಾನ ಸಂಸ್ಥೆಯ ವಿಮಾನಗಳು ದೀರ್ಘ ಮಾರ್ಗಗಳಲ್ಲಿ ಸಂಚರಿಸಬೇಕಾಗಿದೆ.
ಸಂಚಾರ ಸಂಬಂಧಿತ ಶುಲ್ಕಗಳು ಸೇರಿದಂತೆ ಕಾರ್ಯಾಚರಣೆ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ SpiceJet ವಕ್ತಾರರು ತಿಳಿಸಿದ್ದಾರೆ.
'ಇವೆಲ್ಲವೂ ಉದ್ಯಮದಲ್ಲಿ ಸಾಮಾನ್ಯವಾಗಿ ಎದುರಾಗುವ ಸಮಸ್ಯೆಗಳಾಗಿವೆ. ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ವಿಮಾನಗಳ ಕಾರ್ಯಾಚರಣೆ ಮೇಲೆ ಇದರಿಂದ ಯಾವುದೇ ಪರಿಣಾಮವಾಗದು. ಅವಶ್ಯಕತೆಗಳಿಗೆ ಅನುಗುಣವಾಗಿ ನಿಗದಿತ ಸೇವೆಗಳನ್ನು ನಿರ್ವಹಿಸುವುದನ್ನು ಮುಂದುವರಿಸುತ್ತೇವೆ' ಎಂದು ಹೇಳಿದ್ದಾರೆ.
ಬಾಕಿಗೆ ಸಂಬಂಧಿಸಿದಂತೆ ಸ್ಪಷ್ಟವಾಗಿ ವಿವರಗಳನ್ನು ಬಹಿರಂಗಪಡಿಸದಿದ್ದರೂ, SpiceJetಗೆ ಬಾಂಗ್ಲಾದೇಶವು ತನ್ನ ವಾಯುಪ್ರದೇಶವನ್ನು ಬಳಸದಂತೆ ನಿಷೇಧಿಸಿದೆ ಎಂಬದನ್ನು ಮೂಲಗಳು ಖಚಿತವಾಗಿ ಹೇಳಿವೆ.
ಈ ವಿಚಾರವಾಗಿ, ಬಾಂಗ್ಲಾದೇಶ ನಾಗರಿಕ ವಿಮಾನಯಾನ ಪ್ರಾಧಿಕಾರ (CAAB) ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೋಲ್ಕತ್ತದಿಂದ ಗುವಾಹಟಿ ಮತ್ತು ಇಂಫಾಲ್‌ಗೆ ಹಾರಾಟ ನಡೆಸುವ SpiceJet ವಿಮಾನಗಳು ಬಾಂಗ್ಲಾದೇಶ ವಾಯುಪ್ರದೇಶವನ್ನು ಬಳಸುತ್ತಿಲ್ಲ. ದೀರ್ಘ ಮಾರ್ಗಗಳ ಮೂಲಕ ಸಂಚರಿಸುತ್ತಿವೆ ಎಂದು Flightradar24.com ಗುರುವಾರ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.