ADVERTISEMENT

ಟ್ವಿಟರ್ ಖರೀದಿಗೆ ಮುಂದಾದ ಸಿರಿವಂತ ಎಲಾನ್ ಮಸ್ಕ್; ₹3.12 ಲಕ್ಷ ಕೋಟಿ ಬೆಲೆ ನಿಗದಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 14:05 IST
Last Updated 14 ಏಪ್ರಿಲ್ 2022, 14:05 IST
ಎಲಾನ್‌ ಮಸ್ಕ್‌
ಎಲಾನ್‌ ಮಸ್ಕ್‌   

ಸ್ಯಾನ್‌ ಫ್ರ್ಯಾನ್ಸಿಸ್ಕೊ: ಜಗತ್ತಿನ ಅತಿ ಸಿರಿವಂತ ಉದ್ಯಮಿ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಖರೀದಿಸಲು ಒಲವು ತೋರಿದ್ದಾರೆ. 41 ಬಿಲಿಯನ್‌ ಡಾಲರ್‌ (ಸುಮಾರು 3.12 ಲಕ್ಷ ಕೋಟಿ ರೂಪಾಯಿ) ನೀಡಿ ಕಂಪನಿಯನ್ನೇ ತನ್ನದಾಗಿಸಿಕೊಳ್ಳಲು ಮುಂದಾಗಿದ್ದಾರೆ. ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್‌ನ ಆಡಳಿತ ಮಂಡಳಿಗೆ ಸೇರಲು ಎಲಾನ್‌ ಇತ್ತೀಚೆಗಷ್ಟೇ ನಿರಾಕರಿಸಿದ್ದರು.

ಟ್ವಿಟರ್‌ನ ಪ್ರತಿ ಷೇರಿಗೆ 54.20 ಡಾಲರ್‌ (₹4,124.81) ಕೊಡುವುದಾಗಿ ಎಲಾನ್‌ ಮಸ್ಕ್‌ ಷೇರುಪೇಟೆ ನಿಯಂತ್ರಣ ಮಂಡಳಿಗೆ ಸಲ್ಲಿಸಿರುವ ದಾಖಲೆ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ. ಪ್ರಸ್ತುತ ಟ್ವಿಟರ್‌ನ ಪ್ರತಿ ಷೇರು 45.85 ಡಾಲರ್‌ಗಳಲ್ಲಿ (₹3,489.35) ವಹಿವಾಟು ನಡೆದಿದೆ.

‘ಮುಕ್ತ ಅಭಿವ್ಯಕ್ತಿಗೆ ಜಗತ್ತಿನ ಎಲ್ಲೆಡೆ ವೇದಿಕೆಯಾಗಬಲ್ಲ ಶಕ್ತಿ ಟ್ವಿಟರ್‌ಗೆ ಇದೆ ಎಂಬ ನಂಬಿಕೆಯಿಂದ ನಾನು ಟ್ವಿಟರ್‌ನಲ್ಲಿ ಹೂಡಿಕೆ ಮಾಡಿದ್ದೇನೆ. ಆದರೆ, ಟ್ವಿಟರ್ ಕಂಪನಿಯು ಈಗಿನ ಸ್ವರೂಪದಲ್ಲಿ ಈ ಉದ್ದೇಶವನ್ನು ಈಡೇರಿಸುವುದಿಲ್ಲ, ಬೆಳೆಯುವುದೂ ಇಲ್ಲ ಎಂಬುದು ನನಗೆ ಅರಿವಾಗಿದೆ. ಟ್ವಿಟರ್‌ಅನ್ನು ಖಾಸಗಿ ಕಂಪನಿಯನ್ನಾಗಿ ಪರಿವರ್ತಿಸಬೇಕು’ ಎಂದು ಎಲಾನ್‌ ಅವರು ಟ್ವಿಟರ್‌ ಅಧ್ಯಕ್ಷ ಬ್ರೆಟ್‌ ಟೇಲರ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ಎಲಾನ್‌ ಮಸ್ಕ್ ಅವರು ಟ್ವಿಟರ್ ಷೇರುಗಳನ್ನು ಜನವರಿ 31ರಿಂದ ಪ್ರತಿದಿನವೂ ಖರೀದಿಸುತ್ತಿದ್ದಾರೆ.

'ಈಗ ನೀಡುತ್ತಿರುವ ಬೆಲೆಯು ಅಂತಿಮ ಕೊಡುಗೆಯಾಗಿದೆ, ಅದನ್ನು ಸ್ವೀಕರಿಸದಿದ್ದರೆ, ಕಂಪನಿಯ ಷೇರುದಾರನ ಸ್ಥಾನದ ಬಗ್ಗೆ ನಾನು ಯೋಚಿಸಬೇಕಾಗುತ್ತದೆ. ಟ್ವಿಟರ್‌ಗೆ ಅಸಾಧಾರಣ ಸಾಮರ್ಥ್ಯವಿದೆ. ಅದನ್ನು ನಾನು ಹೊರತರುತ್ತೇನೆ' ಎಂದು ಎಲಾನ್‌ ಹೇಳಿದ್ದಾರೆ.

ಪ್ರಸ್ತುತ ಟ್ವಿಟರ್‌ನಲ್ಲಿ ಎಲಾನ್‌ ಮಸ್ಕ್ ಅವರು ಶೇಕಡ 9.2ರಷ್ಟು ಷೇರುಗಳನ್ನು (7.35 ಕೋಟಿ ಷೇರುಗಳು) ಹೊಂದಿದ್ದು, ಪೂರ್ಣ ಶೇ 100ರಷ್ಟು ಷೇರುಗಳನ್ನು ಖರೀದಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ ವಾರ ಎಲಾನ್‌ ಟ್ವಿಟರ್‌ನಲ್ಲಿ ಷೇರು ಖರೀದಿಸಿರುವ ಬಗ್ಗೆ ಬಹಿರಂಗ ಪಡಿಸುತ್ತಿದ್ದಂತೆ, ಷೇರು ಬೆಲೆ ಶೇಕಡ 25ರಷ್ಟು ಜಿಗಿದಿತ್ತು.

ಟ್ವಿಟರ್‌ನಲ್ಲಿ ಎಲಾನ್‌ ಮಸ್ಕ್‌ 8 ಕೋಟಿಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.