ನವದೆಹಲಿ: ಜವಳಿ, ರಾಸಾಯನಿಕಗಳ ವಲಯದ ರಫ್ತುದಾರರಿಗೆ ನೆರವಾಗುವ ದಿಸೆಯಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರವು ಮುಂದಡಿ ಇರಿಸಿದೆ ಎಂದು ಮೂಲಗಳು ಹೇಳಿವೆ.
ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸಿದ್ದು, ಅದರ ದುಷ್ಪರಿಣಾಮದಿಂದ ಈ ವಲಯಗಳನ್ನು ರಕ್ಷಿಸಲು ಕೇಂದ್ರವು ಕ್ರಮಕ್ಕೆ ಮುಂದಾಗಿದೆ ಎಂದು ತಿಳಿಸಿವೆ.
ಅಮೆರಿಕ ವಿಧಿಸಿರುವ ಸುಂಕವು ಆಗಸ್ಟ್ 7ರಿಂದ ಜಾರಿಗೆ ಬರಲಿದೆ. ವಿವಿಧ ರಫ್ತು ವಲಯಗಳ ಪ್ರತಿನಿಧಿಗಳ ಜೊತೆ ಕೇಂದ್ರ ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಉಕ್ಕು, ಆಹಾರ ಸಂಸ್ಕರಣೆ, ಎಂಜಿನಿಯರಿಂಗ್, ಸಾಗರ ಉತ್ಪನ್ನಗಳು, ಕೃಷಿ ವಲಯದ ಪ್ರತಿನಿಧಿಗಳು ಸಭೆಯಲ್ಲಿ ಇದ್ದರು. ಹೆಚ್ಚುವರಿ ಸುಂಕದಿಂದಾಗಿ ಆಗುವ ಪರಿಣಾಮಗಳ ಬಗ್ಗೆ ತಿಳಿಯಲು ಸಭೆ ಕರೆಯಲಾಗಿತ್ತು ಎಂದು ಮೂಲವೊಂದು ಹೇಳಿದೆ.
ವಿವಿಧ ವಲಯಗಳ ರಫ್ತುದಾರರು ಸರ್ಕಾರದಿಂದ ಹಣಕಾಸಿನ ನೆರವು ಕೇಳಿದ್ದಾರೆ. ಕಡಿಮೆ ಬಡ್ಡಿ ದರಕ್ಕೆ ಸಾಲ ಕೊಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ರಫ್ತು ಮಾಡಲಾದ ಉತ್ಪನ್ನಗಳಿಗೆ ವಿಧಿಸುವ ಸುಂಕಗಳನ್ನು ಮರುಪಾವತಿ ಮಾಡುವ ಯೋಜನೆಯನ್ನು ವಿಸ್ತರಿಸಬೇಕು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೆರಿಗೆಗಳಲ್ಲಿ ವಿನಾಯಿತಿ ಕೊಡುವ ಯೋಜನೆಯನ್ನು ಕೂಡ ವಿಸ್ತರಿಸಬೇಕು ಎಂದು ಅವರು ಕೋರಿದ್ದಾರೆ.
ಇವಲ್ಲದೆ, ಬಾಕಿ ಪಾವತಿಗಳು ಸಕಾಲದಲ್ಲಿ ಆಗುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು ಹಾಗೂ ಅಮೆರಿಕಕ್ಕೆ ಸರಕುಗಳನ್ನು ರಫ್ತು ಮಾಡಲು ನೇರ ಜಲ ಮಾರ್ಗವನ್ನು ಗುರುತು ಮಾಡಿಕೊಡಬೇಕು ಎಂದೂ ಅವರು ಆಗ್ರಹ ಮಂಡಿಸಿದ್ದಾರೆ ಎಂದು ಗೊತ್ತಾಗಿದೆ.
ಈ ಎಲ್ಲ ಮನವಿಗಳನ್ನು ಸಚಿವಾಲಯವು ಪರಿಗಣಿಸಿದೆ. ರಫ್ತುದಾರರಿಗೆ ನೆರವಿನ ಹಸ್ತ ಚಾಚಲು ಸಚಿವಾಲಯವು ರಾಜ್ಯಗಳ ಜೊತೆಯೂ ಮಾತುಕತೆ ನಡೆಸಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಮೆರಿಕವು ವಿಧಿಸಿರುವ ಹೆಚ್ಚುವರಿ ಸುಂಕದ ಪರಿಣಾಮವು ಜಾಸ್ತಿ ಇರುವ ವಲಯಗಳ ಪಟ್ಟಿಯಲ್ಲಿ ಜವಳಿ, ಮುತ್ತು ಮತ್ತು ಆಭರಣ, ಸೀಗಡಿ, ಚರ್ಮೋತ್ಪನ್ನಗಳು ಹಾಗೂ ಪಾದರಕ್ಷೆ, ರಾಸಾಯನಿಕಗಳು, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಯಂತ್ರೋಪಕರಣಗಳು ಇವೆ.
ಜವಳಿ, ರಾಸಾಯನಿಕರು ಹಾಗೂ ಸೀಗಡಿ ರಫ್ತು ವಲಯವು ಇತರ ವಲಯಗಳಿಗಿಂತ ಹೆಚ್ಚು ಸಂಕಷ್ಟ ಎದುರಿಸಬೇಕಾಗುತ್ತದೆ. ಏಕೆಂದರೆ ಭಾರತಕ್ಕೆ ಅಮೆರಿಕದ ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡುವ ಬಾಂಗ್ಲಾದೇಶ, ವಿಯೆಟ್ನಾಂ, ಥಾಯ್ಲೆಂಡ್ ದೇಶಗಳಿಗೆ ಕಡಿಮೆ ಪ್ರಮಾಣದ ಸುಂಕ ನಿಗದಿ ಮಾಡಲಾಗಿದೆ ಎಂದು ರಫ್ತುದಾರರ ಪ್ರತಿನಿಧಿಗಳು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.