ಡೊನಾಲ್ಡ್ ಟ್ರಂಪ್ ಹಾಗೂ ಷಿ ಜಿಂಗ್‌ಪಿಂಗ್
ರಾಯಿಟರ್ಸ್ ಚಿತ್ರ
ಬೀಜಿಂಗ್: ಅಮೆರಿಕದಿಂದ ಆಮದಾಗುವ ಎಲ್ಲಾ ಸರಕುಗಳ ಮೇಲೆ ಚೀನಾವು ಶೇ 34ರಷ್ಟು ಸುಂಕ ವಿಧಿಸಿದ್ದು, ಏಪ್ರಿಲ್ 10ರಿಂದ ಈ ಹೊಸ ಸುಂಕ ನೀತಿಯು ಜಾರಿಗೆ ಬರಲಿದೆ. ಇದರಿಂದ ಜಗತ್ತಿನ ಎರಡು ಪ್ರಮುಖ ರಾಷ್ಟ್ರಗಳ ನಡುವೆ ವ್ಯಾಪಾರ ಬಿಕ್ಕಟ್ಟು ಸೃಷ್ಟಿಯಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಚೀನಾ ಸೇರಿ ಜಗತ್ತಿನ 180 ದೇಶಗಳ ಮೇಲೆ ಪ್ರತಿ ಸುಂಕ ವಿಧಿಸಿದೆ. ಚೀನಾದ ಸರಕುಗಳ ಮೇಲೆ ಈಗಾಗಲೇ ಶೇ 20ರಷ್ಟು ಸುಂಕ ವಿಧಿಸುತ್ತಿತ್ತು. ಈಗ ಶೇ 34ರಷ್ಟು ಪ್ರತಿ ಸುಂಕ ವಿಧಿಸಿತ್ತು. ಒಟ್ಟಾರೆ ಸುಂಕದ ಪ್ರಮಾಣ ಶೇ 54ರಷ್ಟು ಆಗಿದೆ. ಇದಕ್ಕೆ ಪ್ರತೀಕಾರವಾಗಿ ಚೀನಾ ಕೂಡ ಸುಂಕ ಹೆಚ್ಚಿಸುವ ಮೂಲಕ ತಿರುಗೇಟು ನೀಡಿದೆ.
ರಾಷ್ಟ್ರದ ಹಿತಾಸಕ್ತಿ ರಕ್ಷಣೆಗಾಗಿ ಅಮೆರಿಕದ 16 ಸಂಸ್ಥೆಗಳಿಗೆ ಪೂರೈಸುತ್ತಿದ್ದ ಸರಕುಗಳ ರಫ್ತನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ ಎಂದು ಚೀನಾದ ವಾಣಿಜ್ಯ ಸಚಿವಾಲಯ ತಿಳಿಸಿದೆ.
‘ಅಮೆರಿಕದ ಸುಂಕ ನೀತಿಯು ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ಮತ್ತು ದ್ವಿಪಕ್ಷೀಯ ವ್ಯಾಪಾರದ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಶಾಸನಾತ್ಮಕ ಹಕ್ಕು ಮತ್ತು ದೇಶದ ಹಿತಾಸಕ್ತಿ ರಕ್ಷಣೆಗಾಗಿ ಹೋರಾಡುತ್ತೇವೆ. ಅಮೆರಿಕವು ತನ್ನ ಸುಂಕದ ನೀತಿಯನ್ನು ಸ್ಥಗಿತಗೊಳಿಸಬೇಕು’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೋ ಜಿಯಾಕುನ್ ಹೇಳಿದ್ದಾರೆ.
2024ರಲ್ಲಿ ಅಮೆರಿಕವು ಚೀನಾಕ್ಕೆ ₹12.26 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ರಫ್ತು ಮಾಡಿದೆ. ಇದೇ ಅವಧಿಯಲ್ಲಿ ಅಮೆರಿಕವು ಚೀನಾದಿಂದ ₹37.53 ಲಕ್ಷ ಕೋಟಿ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದೆ.
ಅಮೆರಿಕದ ಖರೀದಿದಾರರೊಟ್ಟಿಗೆ ಪ್ರತಿ ಸುಂಕದ ಪರಿಣಾಮ ಮತ್ತು ಅದನ್ನು ನಿಭಾಯಿಸುವ ಕುರಿತು ದೇಶದ ಪೂರೈಕೆದಾರರು ಮಾತುಕತೆ ಆರಂಭಿಸಿದ್ದಾರೆಎಸ್.ಸಿ. ರಾಲ್ಹಾನ್ ಅಧ್ಯಕ್ಷ ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.