ADVERTISEMENT

ಆರ್‌ಇಐಟಿ ‘ಈಕ್ವಿಟಿ’ ಎಂದು ಪರಿಗಣನೆ: ಸೆಬಿ

ಪಿಟಿಐ
Published 15 ಸೆಪ್ಟೆಂಬರ್ 2025, 13:46 IST
Last Updated 15 ಸೆಪ್ಟೆಂಬರ್ 2025, 13:46 IST
   

ನವದೆಹಲಿ: ಮ್ಯೂಚುವಲ್‌ ಫಂಡ್‌ಗಳ ಪಾಲಿಗೆ ರಿಯಲ್ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳನ್ನು (ಆರ್‌ಇಐಟಿ) ‘ಈಕ್ವಿಟಿ’ ಎಂದು ವರ್ಗೀಕರಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ತೀರ್ಮಾನಿಸಿರುವುದು ಪ್ರಗತಿಪರ ನಡೆ ಎಂದು ಉದ್ಯಮ ವಲಯ ಹೇಳಿದೆ.

ಸೆಬಿ ನಡೆಯು ಆರ್‌ಇಐಟಿಗಳಲ್ಲಿ ಹೂಡಿಕೆದಾರರ ಭಾಗವಹಿಸುವಿಕೆಯನ್ನು ಬಲಪಡಿಸುತ್ತದೆ ಎಂದು ಉದ್ಯಮದ ಪ್ರತಿನಿಧಿಗಳು ಹೇಳಿದ್ದಾರೆ.

ಆರ್‌ಇಐಟಿಗಳಲ್ಲಿ ಮ್ಯೂಚುವಲ್‌ ಫಂಡ್‌ಗಳ ಹೂಡಿಕೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ಸೆಬಿ ಕಳೆದ ವಾರ, ‘ಸೆಬಿ (ಮ್ಯೂಚುವಲ್‌ ಫಂಡ್ಸ್‌) ನಿಯಮ – 1996’ಕ್ಕೆ ತಿದ್ದುಪಡಿ ತರಲು ಒಪ್ಪಿಗೆ ನೀಡಿದೆ. ತಿದ್ದುಪಡಿ ತಂದು ಆರ್‌ಇಐಟಿಗಳನ್ನು ‘ಈಕ್ವಿಟಿ’ ಎಂದು ವರ್ಗೀಕರಿಸಲಾಗುತ್ತದೆ. ಆದರೆ ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳ ವರ್ಗೀಕರಣವನ್ನು ‘ಹೈಬ್ರಿಡ್’ ಎಂದೇ ಉಳಿಸಿಕೊಳ್ಳಲಾಗುತ್ತದೆ.

ADVERTISEMENT

ಸೆಬಿ ಕೈಗೊಂಡಿರುವ ತೀರ್ಮಾನದ ಪರಿಣಾಮವಾಗಿ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಹೂಡಿಕೆ ಇನ್ನಷ್ಟು ಹೆಚ್ಚಾಗುತ್ತದೆ, ಇನ್ನಷ್ಟು ಹೆಚ್ಚು ಆರ್‌ಇಐಟಿಗಳು ಭಾರತದ ಷೇರುಪೇಟೆಗಳಲ್ಲಿ ನೋಂದಾಯಿತವಾಗಲು ಇದು ಉತ್ತೇಜನ ನೀಡುತ್ತದೆ ಎಂದು ಭಾರತೀಯ ಆರ್‌ಇಐಟಿಗಳ ಸಂಘಟನೆಯು (ಐಆರ್‌ಎ) ಹೇಳಿದೆ. ಷೇರುಪೇಟೆ ನೋಂದಾಯಿತ ಆರ್‌ಇಐಟಿಗಳ ಪ್ರತಿನಿಧಿಗಳು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರ್‌ಇಐಟಿಗಳು ಆದಾಯ ತಂದುಕೊಡುವ ರಿಯಲ್‌ ಎಸ್ಟೇಟ್‌ ಆಸ್ತಿಗಳ ಮಾಲೀಕತ್ವ ಹೊಂದಿರುತ್ತವೆ ಅಥವಾ ಅಂತಹ ಆಸ್ತಿಗಳನ್ನು ನಿರ್ವಹಿಸುತ್ತಿರುತ್ತವೆ. ಅವು ಹೂಡಿಕೆದಾರರಿಗೆ ಆಸ್ತಿಯನ್ನು ನೇರವಾಗಿ ಖರೀದಿಸದೆಯೇ ಅವುಗಳ ಆದಾಯದಲ್ಲಿ ಒಂದು ಪಾಲನ್ನು ಪಡೆದುಕೊಳ್ಳಲು ನೆರವಾಗುತ್ತವೆ.

ಜಾಗತಿಕ ಮಟ್ಟದಲ್ಲಿ ಕೂಡ ಆರ್‌ಇಐಟಿಗಳು ಈಕ್ವಿಟಿ ಸೂಚ್ಯಂಕಗಳ ಭಾಗವಾಗಿವೆ, ಸೆಬಿ ಈಗ ತೆಗೆದುಕೊಂಡಿರುವ ತೀರ್ಮಾನವು ಪ್ರಗತಿಪರವಾದುದು ಎಂದು ಐಆರ್‌ಎ ಹೇಳಿದೆ. ದೇಶದಲ್ಲಿ ಈಗ ಐದು ಆರ್‌ಇಐಟಿಗಳು ಷೇರುಪೇಟೆಯಲ್ಲಿ ನೋಂದಾಯಿತ ಆಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.