ಮುಂಬೈ: ಭಾರತ ಸೇರಿದಂತೆ ಜಗತ್ತಿನಾದ್ಯಂತ ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಹವಾಮಾನ ಬದಲಾವಣೆಯೇ ಕಾರಣ ಎಂದು ಜಾಗತಿಕ ಅಧ್ಯಯನದ ವರದಿ ಶುಕ್ರವಾರ ತಿಳಿಸಿದೆ.
ಭಾರತದಲ್ಲಿ ಈರುಳ್ಳಿ, ಬ್ರಿಟನ್‌ನಲ್ಲಿ ಆಲೂಗೆಡ್ಡೆ, ಕ್ಯಾಲಿಫೋರ್ನಿಯಾದ ತರಕಾರಿಗಳು, ದಕ್ಷಿಣ ಆಫ್ರಿಕಾದಲ್ಲಿ ಮೆಕ್ಕೆಜೋಳ ಸೇರಿ ಹಲವಾರು ಆಹಾರ ಪದಾರ್ಥಗಳ ಬೆಲೆ ಏರಿಕೆಯ ಮೇಲೆ ಹವಾಮಾನ ವೈಪರೀತ್ಯವು ಪರಿಣಾಮ ಬೀರಿದೆ ಎಂದು ಬಾರ್ಸಿಲೋನಾದ ಸೂಪರ್ ಕಂಪ್ಯೂಟಿಂಗ್ ಕೇಂದ್ರದ ‘ಹವಾಮಾನ ವೈಪರೀತ್ಯಗಳು, ಆಹಾರ ಬೆಲೆ ಏರಿಕೆ ಮತ್ತು ಅದರ ವ್ಯಾಪಕ ಸಾಮಾಜಿಕ ಪರಿಣಾಮ’ ಎಂಬ ವರದಿ ತಿಳಿಸಿದೆ. ಈ ಅಧ್ಯಯನವನ್ನು 2022ರಿಂದ 2024ರವರೆಗೆ 18 ರಾಷ್ಟ್ರಗಳಲ್ಲಿನ ಮಾಹಿತಿ ಆಧರಿಸಿ ಸಿದ್ಧಪಡಿಸಲಾಗಿದೆ.
ಬಿಸಿಗಾಳಿಯ ಪರಿಣಾಮ 2024ರ ಎರಡನೇ ತ್ರೈಮಾಸಿಕದಲ್ಲಿ ಈರುಳ್ಳಿ ಮತ್ತು ಆಲೂಗೆಡ್ಡೆ ಬೆಲೆಯು ಭಾರತದಲ್ಲಿ ಶೇ 80ಕ್ಕೂ ಹೆಚ್ಚು ಏರಿಕೆಯಾಗಿದೆ.
ನಿವ್ವಳ–ಶೂನ್ಯ ಹೊರಸೂಸುವಿಕೆಯ ಗುರಿ ತಲುಪುವವರೆಗೆ, ಹವಾಮಾನ ವೈಪರೀತ್ಯವು ಇನ್ನಷ್ಟು ಹೆಚ್ಚಲಿದೆ. ಇದು ವಿಶ್ವದಾದ್ಯಂತ ಬೆಳೆಗಳಿಗೆ ಹಾನಿ ಮಾಡುತ್ತಿದ್ದು, ಆಹಾರದ ಬೆಲೆಯನ್ನು ಹೆಚ್ಚಿಸುತ್ತಿದೆ. ಈ ಬೆಲೆ ಹೆಚ್ಚಳದಿಂದ ಕಡಿಮೆ ಆದಾಯ ಹೊಂದಿರುವ ಕುಟುಂಬಗಳು ಕಡಿಮೆ ಪೌಷ್ಟಿಕಾಂಶ, ಅಗ್ಗದ ದರದ ಆಹಾರಗಳನ್ನು ಸೇವಿಸಲು ಮುಂದಾಗುತ್ತಾರೆ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.
ಈ ಅಧ್ಯಯನದ ಅವಧಿಯಲ್ಲಿ ಕ್ಯಾಲಿಫೋರ್ನಿಯಾ ಮತ್ತು ಅರಿಜೋನಾದಲ್ಲಿ ತರಕಾರಿಗಳ ಬೆಲೆ ಶೇ 80ರಷ್ಟು ಏರಿಕೆಯಾಗಿದ್ದರೆ, ಇಥಿಯೋಪಿಯಾದಲ್ಲಿ ಶೇ 40ರಷ್ಟು ಹೆಚ್ಚಳವಾಗಿತ್ತು. ಬ್ರಿಟನ್‌ನಲ್ಲಿ ಆಲೂಗೆಡ್ಡೆ ದರ ಶೇ 22ರಷ್ಟು ಏರಿಕೆಯಾಗಿದೆ.
ಐವರಿಕೋಸ್ಟ್ ಮತ್ತು ಘಾನಾದಲ್ಲಿ ಸಂಭವಿಸಿದ ಬಿಸಿಗಾಳಿಯಿಂದ ಜಾಗತಿಕವಾಗಿ ಕೋಕೊ ದರ ಶೇ 300ರಷ್ಟು ಹೆಚ್ಚಳವಾಗಿದೆ. ಈ ಎರಡು ರಾಷ್ಟ್ರಗಳು ಜಾಗತಿಕ ಕೋಕೊ ಉತ್ಪಾದನೆಯಲ್ಲಿ ಶೇ 60ರಷ್ಟು ಪಾಲನ್ನು ಹೊಂದಿದೆ.
ಹವಾಮಾನ ಬದಲಾವಣೆಯು ಜಾಗತಿಕ ಕಾಫಿ ಮಾರುಕಟ್ಟೆಗೂ ತೀವ್ರ ಹೊಡೆತ ನೀಡಿದೆ. ಬ್ರೆಜಿಲ್ ಜಗತ್ತಿನ ಅತಿದೊಡ್ಡ ಅರೇಬಿಕಾ ರಪ್ತು ಮಾಡುವ ರಾಷ್ಟ್ರ. ವಿಯೆಟ್ನಾಂ ರೊಬಸ್ಟಾದ ರಫ್ತುದಾರ. 2023ರಲ್ಲಿ ಬ್ರೆಜಿಲ್‌ನಲ್ಲಿ ಉಂಟಾದ ಬರಗಾಲದಿಂದ ಜಾಗತಿಕವಾಗಿ ಕಾಫಿ ದರ ಶೇ 55ರಷ್ಟು ಏರಿಕೆಯಾದರೆ, ರೊಬಸ್ಟಾ ಶೇ 100ರಷ್ಟು ಹೆಚ್ಚಳವಾಯಿತು ಎಂದು ಅಧ್ಯಯನ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.