ನವದೆಹಲಿ: ಪ್ರಸಕ್ತ ವರ್ಷದ ನವೆಂಬರ್ ತಿಂಗಳಲ್ಲಿ 15.90 ಲಕ್ಷ ಟನ್ ಅಡುಗೆ ಎಣ್ಣೆ ದೇಶಕ್ಕೆ ಆಮದಾಗಿದೆ ಎಂದು ಭಾರತೀಯ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್‌ಇಎ) ಗುರುವಾರ ತಿಳಿಸಿದೆ.
2023ರ ನವೆಂಬರ್‌ನಲ್ಲಿ 11.48 ಲಕ್ಷ ಟನ್ ಆಮದಾಗಿತ್ತು. ಈ ಆಮದು ಪ್ರಮಾಣಕ್ಕೆ ಹೋಲಿಸಿದರೆ ಶೇ 39ರಷ್ಟು ಏರಿಕೆಯಾಗಿದೆ. ಕಚ್ಚಾ ಸೂರ್ಯಕಾಂತಿ ಎಣ್ಣೆ ಮತ್ತು ಕಚ್ಚಾ ಸೋಯಾಬಿನ್ ಎಣ್ಣೆ ಆಮದು ಪ್ರಮಾಣ ಹೆಚ್ಚಳದಿಂದ ಅಡುಗೆ ಎಣ್ಣೆ ಆಮದು ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ.
2024–25ರ ತೈಲ ಮಾರುಕಟ್ಟೆ ವರ್ಷದ (ನವೆಂಬರ್‌ನಿಂದ ಅಕ್ಟೋಬರ್) ಮೊದಲ ತಿಂಗಳಲ್ಲಿ ಒಟ್ಟಾರೆ ಅಡುಗೆ ಎಣ್ಣೆ ಆಮದು ಶೇ 40ರಷ್ಟು ಹೆಚ್ಚಳವಾಗಿದ್ದು, 16.27 ಲಕ್ಷ ಟನ್ ಆಗಿದೆ.
ಅಡುಗೆಯೇತರ ಎಣ್ಣೆ ಆಮದು ಪ್ರಮಾಣ ಕಳೆದ ವರ್ಷದ ನವೆಂಬರ್‌ನಲ್ಲಿ 12,498 ಟನ್ ಇತ್ತು. ಅದು ಈ ಬಾರಿ 37,341 ಟನ್‌ಗೆ ಏರಿಕೆಯಾಗಿದೆ. ಆರ್‌ಬಿಡಿ ಪಾಮೋಲಿನ್ ಎಣ್ಣೆ 2.84 ಲಕ್ಷ ಟನ್ ಆಮದಾಗಿದೆ.
ಪ್ರಸಕ್ತ ವರ್ಷದ ನವೆಂಬರ್‌ನಲ್ಲಿ ಕಚ್ಚಾ ಸೂರ್ಯಕಾಂತಿ ಎಣ್ಣೆ 3.40 ಲಕ್ಷ ಟನ್ ಮತ್ತು ಕಚ್ಚಾ ಸೋಯಾಬಿನ್ ಎಣ್ಣೆ 4.07 ಲಕ್ಷ ಟನ್ ಆಮದಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಆಮದು ಪ್ರಮಾಣ ಕ್ರಮವಾಗಿ 1.28 ಲಕ್ಷ ಟನ್ ಮತ್ತು 1.49 ಲಕ್ಷ ಟನ್ ಆಗಿತ್ತು.
ಆದರೆ, ಕಚ್ಚಾ ತಾಳೆ ಎಣ್ಣೆ ಆಮದು 6.92 ಲಕ್ಷ ಟನ್‌ನಿಂದ 5.47 ಲಕ್ಷ ಟನ್‌ಗೆ ಇಳಿದಿದೆ ಎಂದು ತಿಳಿಸಿದೆ.
ಭಾರತಕ್ಕೆ, ಇಂಡೊನೇಷ್ಯಾ ಮತ್ತು ಮಲೇಷ್ಯಾ ಆರ್‌ಬಿಡಿ ಪಾಮೋಲಿನ್ ಮತ್ತು ಕಚ್ಚಾ ತಾಳೆ ಎಣ್ಣೆಯನ್ನು ಪೂರೈಕೆ ಮಾಡುತ್ತವೆ. ಅರ್ಜೆಂಟೀನಾ, ಬ್ರೆಜಿಲ್ ಮತ್ತು ರಷ್ಯಾದಿಂದ ಸೋಯಾಬಿನ್ ಎಣ್ಣೆ, ರಷ್ಯಾ, ಉಕ್ರೇನ್ ಮತ್ತು ಅರ್ಜೆಂಟೀನಾದಿಂದ ಸೂರ್ಯಕಾಂತಿ ಎಣ್ಣೆಯನ್ನು ಭಾರತವು ಆಮದು ಮಾಡಿಕೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.