ಜಿತೇಂದ್ರ ಸಿಂಗ್
–ಪಿಟಿಐ ಚಿತ್ರ
ನವದೆಹಲಿ: ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ವ್ಯಾಪ್ತಿಯ ಕೇಂದ್ರ ಸರ್ಕಾರದ ಎಲ್ಲ ನೌಕರರು ಹಳೆ ಪಿಂಚಣಿ ಯೋಜನೆಯಲ್ಲಿ (ಒಪಿಎಸ್) ಇದ್ದ ನಿವೃತ್ತಿ ಮತ್ತು ಮರಣ ಗ್ರಾಚ್ಯುಟಿ ಸೌಲಭ್ಯ ಪಡೆಯಬಹುದು ಎಂದು ಕೇಂದ್ರ ಸಿಬ್ಬಂದಿ, ಸಾರ್ವಜನಿಕ ದೂರು ಮತ್ತು ಪಿಂಚಣಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಬುಧವಾರ ಹೇಳಿದ್ದಾರೆ.
ಈ ಕ್ರಮವು ಸರ್ಕಾರಿ ನೌಕರರ ಗಮನಾರ್ಹವಾದ ಬೇಡಿಕೆಯೊಂದಕ್ಕೆ ಸ್ಪಂದಿಸಿದೆ ಎಂದು ಅವರು ಹೇಳಿದ್ದಾರೆ. ಸಚಿವಾಲಯದ 11 ವರ್ಷಗಳ ಪಯಣದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುವಾಗ ಈ ವಿವರ ನೀಡಿದ್ದಾರೆ.
ಸಿಬ್ಬಂದಿ ಸಚಿವಾಲಯದ ಅಧೀನದ ಪಿಂಚಣಿ ಮತ್ತು ಪಿಂಚಣಿದಾರರ ಅಭಿವೃದ್ಧಿ ಇಲಾಖೆಯು ಬುಧವಾರ ಆದೇಶವೊಂದನ್ನು ಹೊರಡಿಸಿದೆ.
‘ನೌಕರರು ಸೇವೆಯಲ್ಲಿದ್ದ ಅವಧಿಯಲ್ಲಿ ಮೃತಪಟ್ಟರೆ ಒಪಿಎಸ್ ಸೌಲಭ್ಯಕ್ಕೆ ಮರಳುವ ಅವಕಾಶವನ್ನು ಈ ಆದೇಶವು ಒದಗಿಸಿದೆ. ಇದು ನೌಕರರು ಬಯಸಿದ್ದ ಸ್ಪಷ್ಟನೆಯನ್ನು ಒದಗಿಸಿದೆ’ ಎಂದು ಇಲಾಖೆಯ ಕಾರ್ಯದರ್ಶಿ ವಿ. ಶ್ರೀನಿವಾಸ್ ತಿಳಿಸಿದ್ದಾರೆ.
ಸರ್ಕಾರದ ಈ ಕ್ರಮವನ್ನು ಅಖಿಲ ಭಾರತ ಎನ್‌ಪಿಎಸ್ ನೌಕರರ ಒಕ್ಕೂಟದ ಅಧ್ಯಕ್ಷ ಮಂಜೀತ್ ಸಿಂಗ್ ಪಟೇಲ್ ಸ್ವಾಗತಿಸಿದ್ದಾರೆ. ಯುಪಿಎಸ್ ಅಡಿಯಲ್ಲಿ ಮರಣ ಮತ್ತು ನಿವೃತ್ತಿ ಗ್ರಾಚ್ಯುಟಿ ಸೌಲಭ್ಯವನ್ನು ಒದಗಿಸಿರುವುದು ನೌಕರರಲ್ಲಿನ ತಪ್ಪುಕಲ್ಪನೆಗಳನ್ನು ನಿವಾರಿಸುತ್ತದೆ ಎಂದು ಹೇಳಿದ್ದಾರೆ.
ಯುಪಿಎಸ್ ಸೌಲಭ್ಯ ಪಡೆದಿರುವ ನೌಕರರು ಸೇವಾವಧಿಯಲ್ಲಿ ಮೃತಪಟ್ಟರೆ, ಅಂಗವೈಕಲ್ಯಕ್ಕೆ ತುತ್ತಾದರೆ ಅವರಿಗೆ ಒಪಿಎಸ್ ಸೌಲಭ್ಯ ಸಿಗುವಂತೆ ಮಾಡಿರುವುದು ನ್ಯಾಯ ಒದಗಿಸುವ ಕೆಲಸ ಎಂದು ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.