ADVERTISEMENT

‘ರೈತರ ಪ್ರತಿಭಟನೆಯಿಂದ ದಿನಕ್ಕೆ ₹ 3,500 ಕೋಟಿ ನಷ್ಟ’

ಪಿಟಿಐ
Published 15 ಡಿಸೆಂಬರ್ 2020, 19:30 IST
Last Updated 15 ಡಿಸೆಂಬರ್ 2020, 19:30 IST
ಪ್ರತಿಭಟನಾನಿರತ ರೈತರು –ಪಿಟಿಐ ಚಿತ್ರ
ಪ್ರತಿಭಟನಾನಿರತ ರೈತರು –ಪಿಟಿಐ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟದ ಪರಿಣಾಮವಾಗಿ ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದ ಆರ್ಥಿಕತೆಗೆ ನಷ್ಟ ಉಂಟಾಗುತ್ತಿದೆ ಎಂದು ‘ಅಸೋಚಾಂ’ ಹೇಳಿದೆ.

ಈ ಕೃಷಿ ಕಾಯ್ದೆಗಳ ವಿಚಾರವಾಗಿ ಸೃಷ್ಟಿಯಾಗಿರುವ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅದು ಕೇಂದ್ರ ಸರ್ಕಾರ ಹಾಗೂ ರೈತ ಸಂಘಟನೆಗಳಲ್ಲಿ ಮನವಿ ಮಾಡಿದೆ.

‘ಪ್ರತಿಭಟನೆ ನಡೆಯುತ್ತಿರುವ ಪ್ರದೇಶಗಳ ಅರ್ಥ ವ್ಯವಸ್ಥೆಗಳು ಪ್ರತಿ ದಿನ ₹ 3,000 ಕೋಟಿಯಿಂದ ₹ 3,500 ಕೋಟಿಯಷ್ಟು ನಷ್ಟ ಅನುಭವಿಸುತ್ತಿವೆ. ಪ್ರತಿಭಟನೆಗಳ ಕಾರಣದಿಂದಾಗಿ ಸರಕು ಸಾಗಣೆಗೆ ಕೂಡ ತೊಂದರೆ ಆಗಿದೆ’ ಎಂದು ಅಸೋಚಾಂ ಅಂದಾಜಿಸಿದೆ.

ADVERTISEMENT

‘ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದ ಅರ್ಥ ವ್ಯವಸ್ಥೆಗಳ ಒಟ್ಟು ಗಾತ್ರವು ₹ 18 ಲಕ್ಷ ಕೋಟಿ. ರೈತರ ಪ್ರತಿಭಟನೆ ಹಾಗೂ ರಸ್ತೆ ತಡೆ, ರೈಲು ಸೇವೆಗಳಲ್ಲಿ ವ್ಯತ್ಯಾಸ ಆಗಿರುವುದರ ಕಾರಣದಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ಥಗಿತದ ಸ್ಥಿತಿ ತಲುಪಿವೆ’ ಎಂದು ಅಸೋಚಾಂ ಅಧ್ಯಕ್ಷ ನಿರಂಜನ್ ಹೀರಾನಂದಾನಿ ಹೇಳಿದ್ದಾರೆ.

ರೈತರ ಪ್ರತಿಭಟನೆಯಿಂದಾಗಿ ಪೂರೈಕೆ ವ್ಯವಸ್ಥೆಗೆ ಏಟು ಬಿದ್ದಿದೆ. ಇದು ಮುಂದಿನ ದಿನಗಳಲ್ಲಿ ಅರ್ಥ ವ್ಯವಸ್ಥೆಗೆ ತೊಂದರೆ ನೀಡಲಿದೆ. ಹಾಗೆಯೇ, ಕೋವಿಡ್–19ರಿಂದಾಗಿ ಆಗಿರುವ ಆರ್ಥಿಕ ಹಿಂಜರಿತದಿಂದ ಹೊರಬರುವ ಪ್ರಕ್ರಿಯೆಯ ಮೇಲೆಯೂ ಪರಿಣಾಮ ಉಂಟುಮಾಡಬಹುದು ಎಂದು ಭಾರತೀಯ ಕೈಗಾರಿಕಾ ಮಹಾಸಂಘ (ಸಿಐಐ) ಸೋಮವಾರ ಹೇಳಿತ್ತು.

ಜವಳಿ, ಆಟೊಮೊಬೈಲ್‌ ಬಿಡಿಭಾಗಗಳು, ಬೈಸಿಕಲ್‌, ಕ್ರೀಡಾ ಉತ್ಪನ್ನಗಳ ಉದ್ದಿಮೆಗಳು ಹೊರದೇಶಗಳ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪನ್ನಗಳನ್ನು ರಫ್ತು ಮಾಡುತ್ತವೆ. ಆದರೆ, ಪ್ರತಿಭಟನೆಯ ಕಾರಣದಿಂದಾಗಿ ಈ ವಲಯದ ಉದ್ದಿಮೆಗಳಿಗೆ ಬೇಡಿಕೆಗೆ ತಕ್ಕಂತೆ ಉತ್ಪನ್ನಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಉದ್ಯಮ ವಲಯವು ಜಾಗತಿಕ ಮಟ್ಟದಲ್ಲಿ ಹೊಂದಿರುವ ಒಳ್ಳೆಯ ಹೆಸರಿಗೂ ಧಕ್ಕೆ ಆಗುತ್ತದೆ ಎಂದು ಹೀರಾನಂದಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೆಹಲಿ ಮತ್ತು ಅದರ ಸುತ್ತಲಿನ ಪ್ರದೇಶಗಳಲ್ಲಿ ಕಳೆದ ಇಪ್ಪತ್ತು ದಿನಗಳ ಅವಧಿಯಲ್ಲಿ ಒಟ್ಟು ₹ 5 ಸಾವಿರ ಕೋಟಿ ಮೌಲ್ಯದ ವ್ಯಾಪಾರ ವಹಿವಾಟುಗಳಿಗೆ ತೊಂದರೆ ಆಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಮಹಾಸಂಘ (ಸಿಎಐಟಿ) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.