ಸಾಂದರ್ಭಿಕ ಚಿತ್ರ
ನವದೆಹಲಿ: ಮಧ್ಯಮ ವರ್ಗದವರಿಗೆ ಪರಿಹಾರ ಹಾಗೂ ಮಂದಗತಿಯ ಆರ್ಥಿಕತೆಗೆ ವೇಗ ನೀಡುವ ನಿಟ್ಟಿನಲ್ಲಿ ₹15 ಲಕ್ಷವರೆಗಿನ ಗಳಿಕೆ ಹೊಂದಿರುವವರಿಗೆ ಆದಾಯ ತೆರಿಗೆ ಮಿತಿಯನ್ನು ತಗ್ಗಿಸಲು ಹಣಕಾಸು ಇಲಾಖೆ ಯೋಜನೆ ಹೊಂದಿದೆ ಎಂದು ಸರ್ಕಾರ ಎರಡು ಉನ್ನತ ಮೂಲಗಳು ತಿಳಿಸಿವೆ.
ಈ ಕ್ರಮದಿಂದಾಗಿ ನಗರ ಪ್ರದೇಶದ ದುಬಾರಿ ಜೀವನ ವೆಚ್ಚದಿಂದ ತತ್ತರಿಸಿರುವ ಲಕ್ಷಾಂತರ ತೆರಿಗೆದಾರರಿಗೆ ಪ್ರಯೋಜನವಾಗಲಿದೆ. 2020ರ ತೆರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಂಡಲ್ಲಿ ಮನೆ ಬಾಡಿಗೆ ಮೇಲಿನ ತೆರಿಗೆಗೆ ವಿನಾಯ್ತಿ ನೀಡುವ ಸಾಧ್ಯತೆ ಇದೆ. ಈ ವ್ಯವಸ್ಥೆಯಡಿ ವಾರ್ಷಿಕ ₹3 ಲಕ್ಷದಿಂದ ₹15 ಲಕ್ಷವರೆಗೆ ಆದಾಯ ಇದ್ದಲ್ಲಿ ತೆರಿಗೆಯು ಶೇ 5ರಿಂದ ಶೇ 20ರವರೆಗೆ ವಿಧಿಸಲಾಗುತ್ತಿದೆ. ಇದಕ್ಕೂ ಹೆಚ್ಚಿನ ಆದಾಯಕ್ಕೆ ಶೇ 30ರಷ್ಟು ತೆರಿಗೆ ವಿಧಿಸಲಾಗಿದೆ.
ಎರಡು ವಿಧದ ತೆರಿಗೆ ಪದ್ಧತಿಯ ಆಯ್ಕೆಯನ್ನು ತೆರಿಗೆದಾರರು ಸದ್ಯ ಹೊಂದಿದ್ದಾರೆ. ಹಳೇ ಪದ್ಧತಿಯಲ್ಲಿ ವಿಮೆ ಹಾಗೂ ಮನೆ ಬಾಡಿಗೆಗೆ ತೆರಿಗೆ ವಿನಾಯ್ತಿ ಇದೆ. 2020ರಲ್ಲಿ ಜಾರಿಗೆ ಬಂದ ಹೊಸ ಪದ್ಧತಿಯಲ್ಲಿ ತೆರಿಗೆ ತುಸು ತಗ್ಗಿಸಿದ್ದರೂ, ಗರಿಷ್ಠ ವಿನಾಯ್ತಿಗೆ ಅವಕಾಶ ನೀಡಿರಲಿಲ್ಲ.
2025–26ರ ಬಜೆಟ್‌ನಲ್ಲಿ ಎಷ್ಟು ಪ್ರಮಾಣದ ತೆರಿಗೆ ವಿನಾಯ್ತಿ ಸಿಗಲಿದೆ ಎಂದು ಬಜೆಟ್ ದಿನಾಂಕವಾದ ಫೆ. 1ರೊಳಗಾಗಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಇದರಿಂದ ತೆರಿಗೆ ಬೊಕ್ಕಸಕ್ಕೆ ಎಷ್ಟು ನಷ್ಟವಾಗಲಿದೆ ಎಂಬುದನ್ನು ಈವರೆಗೂ ಅಂದಾಜಿಸಿಲ್ಲ ಎಂದು ನಂಬಲರ್ಹ ಮೂಲಗಳು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಮಧ್ಯಮ ವರ್ಗದವರ ಕೈಯಲ್ಲಿ ಹೆಚ್ಚು ಹಣವಿದ್ದಷ್ಟೂ ದೇಶದ ಆರ್ಥಿಕತೆ ಮತ್ತು ಆದಾಯ ಹೆಚ್ಚಲಿದೆ. ಜುಲೈ ಹಾಗೂ ಸೆಪ್ಟೆಂಬರ್‌ವರೆಗಿನ ಏಳನೇ ತ್ರೈಮಾಸಿಕದಲ್ಲಿ ಜಗತ್ತಿನ 5ನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರದ ವಹಿವಾಟು ಮಂದಗತಿಯಲ್ಲಿ ಸಾಗಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆ, ಸೋಪುಗಳಿಂದ ಶಾಂಪೂವರೆಗೂ, ಕಾರುಗಳಿಂದ ದ್ವಿಚಕ್ರ ವಾಹನಗಳವರೆಗೂ ಬೆಲೆ ಏರಿಕೆ ಬಿಸಿ ಜನರನ್ನು ಬಾಧಿಸಿದೆ. ಇದರಿಂದಾಗಿ ಮಧ್ಯಮವರ್ಗದಿಂದ ತೀವ್ರ ಪ್ರತಿರೋಧವನ್ನು ಸರ್ಕಾರ ಎದುರಿಸುತ್ತಿದೆ. ವೇತನ ಹೆಚ್ಚಳದಂತ ಕ್ರಮ ಕೈಗೊಂಡರೂ ಬೆಲೆ ಏರಿಕೆಯ ಬಿಸಿಯನ್ನು ತಗ್ಗಿಸಲು ಸಾಧ್ಯವಾಗಿಲ್ಲ ಎಂದೇ ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.