ADVERTISEMENT

'ಭಾರತ್‌ಪೇ' ಸಹ ಸಂಸ್ಥಾಪಕ ಅಶನೀರ್‌ ಗ್ರೋವರ್‌ ರಾಜೀನಾಮೆ; ₹1,824 ಕೋಟಿ ಪಾಲು?

ಐಎಎನ್ಎಸ್
Published 1 ಮಾರ್ಚ್ 2022, 7:23 IST
Last Updated 1 ಮಾರ್ಚ್ 2022, 7:23 IST
'ಭಾರತ್‌ಪೇ' ಸಹ ಸಂಸ್ಥಾಪಕ ಅಶನೀರ್‌ ಗ್ರೋವರ್‌
'ಭಾರತ್‌ಪೇ' ಸಹ ಸಂಸ್ಥಾಪಕ ಅಶನೀರ್‌ ಗ್ರೋವರ್‌   

ನವದೆಹಲಿ: ಹಣಕಾಸು ಪಾವತಿ ಪ್ಲಾಟ್‌ಫಾರ್ಮ್‌ ಸ್ಟಾರ್ಟ್‌ಅಪ್‌ 'ಭಾರತ್‌ಪೇ' ಸಹ ಸಂಸ್ಥಾಪಕ ಅಶನೀರ್ ಗ್ರೋವರ್‌ ಅವರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಆದರೆ, ಕಂಪನಿಯ ಅತಿ ದೊಡ್ಡ ಷೇರುದಾರನಾಗಿ ಅಶನೀರ್‌ ಮುಂದುವರಿಯಲಿದ್ದಾರೆ. ತಾವೇ ಸ್ಥಾಪಿಸಿದ ಕಂಪನಿಯ ಹೊಣೆಗಾರಿಕೆಯಿಂದ ಹೊರ ಬರುವಂತೆ ತಮ್ಮ ಮೇಲೆ ಒತ್ತಾಯ ಹೇರಲಾಗಿದೆ ಎಂದು ಆರೋಪಿಸಿರುವ ಅಶನೀರ್‌, ನಿರ್ದೇಶಕರ ಮಂಡಳಿಯನ್ನು ಉದ್ದೇಶಿಸಿ ಪತ್ರ ಬರೆದಿದ್ದಾರೆ.

'ನನ್ನ ಅನುಪಸ್ಥಿತಿಯಲ್ಲೂ ಕಂಪನಿಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬಹುದು ಎಂದು ನೀವು ನಂಬಿರುವುದರಿಂದ ಈ ಸವಾಲನ್ನು ಮುಂದಿಟ್ಟು ಹೊರಡುತ್ತಿದ್ದೇನೆ. ನಾನು ಈವರೆಗೂ ಬೆಳೆಸಿರುವ ಮೌಲ್ಯದ ಅರ್ಧದಷ್ಟಾದರೂ ವೃದ್ಧಿ ಸಾಧಿಸಿ...ನಾನು ಈವರೆಗೂ ಬಳಸಲಾಗಿರುವ ಮೊತ್ತದ ಮೂರು ಪಟ್ಟು ಹೆಚ್ಚು ಮೊತ್ತವನ್ನು ಬಿಟ್ಟು ತೆರಳುತ್ತಿದ್ದೇನೆ. ಭಾರತ್‌ಪೇ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಈ ಮೂಲಕ ರಾಜೀನಾಮೆ ನೀಡುತ್ತಿದ್ದೇನೆ. ಮಂಡಳಿಯ ನಿರ್ದೇಶಕ ಸ್ಥಾನವನ್ನೂ ತೊರೆಯುತ್ತಿದ್ದೇನೆ. ಕಂಪನಿಯ ಅತಿ ದೊಡ್ಡ ಪಾಲುದಾರನಾಗಿ ಮುಂದುವರಿಯಲಿದ್ದೇನೆ' ಎಂದು ಪ್ರಸ್ತಾಪಿಸಿದ್ದಾರೆ.

ADVERTISEMENT

ಅಶನೀರ್‌ ಅವರು ಕಂಪನಿಯಲ್ಲಿ ಹೊಂದಿರುವ ಷೇರಿನ ಪೈಕಿ ಶೇಕಡ 8.5ರಷ್ಟು ಪಾಲನ್ನು ₹4,000 ಕೋಟಿಗೆ ಖರೀದಿಸಲು ಕಂಪನಿಯ ಪ್ರಮುಖ ಹೂಡಿಕೆದಾರರು ಅಸಮ್ಮತಿಸಿದ್ದರು. ಕಂಪನಿಯು ಅವರ ವಿರುದ್ಧ ತನಿಖೆ ಕೈಗೊಂಡಿರುವುದನ್ನು ಪ್ರಶ್ನಿಸಿ ಸಿಂಗಪುರದಲ್ಲಿ ಹೂಡಿದ್ದ ವ್ಯಾಜ್ಯದಲ್ಲಿ ಸೋಲು ಕಂಡರು.

ಹೂಡಿಕೆದಾರರ ಪ್ರಕಾರ, ಅಶನೀರ್‌ ಬಿಂಬಿಸಿರುವಂತೆ ಕಂಪನಿಯ ಮೌಲ್ಯ 6 ಬಿಲಿಯನ್‌ ಡಾಲರ್‌ನಷ್ಟು (ಅಂದಾಜು ₹45,100 ಕೋಟಿ) ಇಲ್ಲ. ಕಂಪನಿಯ ಮೌಲ್ಯ 2.85 ಬಿಲಿಯನ್‌ ಡಾಲರ್‌ನಷ್ಟಿದೆ (₹21,464 ಕೋಟಿ) ಹಾಗೂ ಅದರ ಪ್ರಕಾರ, ಅಶನೀರ್‌ ಹೊಂದಿರುವ ಪಾಲುದಾರಿಕೆ ಮೌಲ್ಯ ಅಂದಾಜು ₹1,824 ಕೋಟಿ.

2018ರಲ್ಲಿ ಅಶನೀರ್‌ ಮತ್ತು ಶಾಶ್ವತ್‌ ನಕರಾನಿ ಅವರು ಭಾರತ್‌ಪೇ ಸ್ಥಾಪಿಸಿದರು.

'ಕಠಿಣ ಪರಿಶ್ರಮದ ಫಲವಾಗಿ 1 ಕೋಟಿ ವಹಿವಾಟುದಾರರನ್ನು ಕಂಪನಿಯು ಹೊಂದಿದೆ. ವಾರ್ಷಿಕ 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತದ ವರ್ಗಾವಣೆ ನಡೆಯುತ್ತಿದೆ ಹಾಗೂ ₹4,000 ಕೋಟಿಗೂ ಹೆಚ್ಚಿನ ಮೊತ್ತದ ಸಾಲ ವಿತರಣೆಯಾಗಿದೆ. ಕೋವಿಡ್‌ ಸಂದರ್ಭದಲ್ಲಿ ಭಾರತ್‌ಪೇ ಮೂಲಕ ಒದಗಿಸಲಾಗಿರುವ ಸಾಲದಿಂದಾಗಿ ಲಕ್ಷಾಂತರ ಮಂದಿ ಸಣ್ಣ ವ್ಯಾಪಾರಸ್ಥರಿಗೆ ಸಹಾಯವಾಗಿದೆ' ಎಂದು ಅಶನೀರ್‌ ಪತ್ರದಲ್ಲಿ ತಿಳಿಸಿದ್ದಾರೆ.

ಕಳೆದ ವಾರ ಅಶನೀರ್‌ ಅವರ ಪತ್ನಿ ಮಾಧುರಿ ಜೈನ್‌ ಗ್ರೂವರ್‌ ಅವರನ್ನು ಹಣಕಾಸು ಅಕ್ರಮಗಳ ಆರೋಪದ ಮೇಲೆ ಕಂಪನಿಯು ಹೊಣೆಗಾರಿಕೆಯಿಂದ ವಜಾಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.