ADVERTISEMENT

‘ಬಂಗಾರಿ’ ಬೆಲೆ ಭಾರಿ ಭಾರಿ.. ಆದರೂ ಬೇಡಿಕೆಯಲ್ಲಿ ರಾಜಿ ಇಲ್ಲಾರಿ..!

ಬೆಲೆ ಏರಿಕೆಯಲ್ಲಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದ್ದರೂ ಚಿನ್ನದ ಬೇಡಿಕೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ

Manjunath C Bhadrashetti
Published 29 ಜನವರಿ 2026, 8:14 IST
Last Updated 29 ಜನವರಿ 2026, 8:14 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮುಂಬೈ: ಬೆಲೆ ಏರಿಕೆಯಲ್ಲಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದ್ದರೂ ಚಿನ್ನದ ಬೇಡಿಕೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ ಎಂಬುದು ‘ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌’ನ (WGC)  ಇತ್ತೀಚಿನ ಅಂಕಿ–ಅಂಶಗಳು ಎತ್ತಿ ತೋರಿಸಿವೆ.

2025ರಲ್ಲಿ ಒಂದೇ ವರ್ಷದಲ್ಲಿ ಜಾಗತಿಕವಾಗಿ ಚಿನ್ನದ ಬೇಡಿಕೆ ಪ್ರಮಾಣ ಬರೋಬ್ಬರಿ ಐದು ಸಾವಿರ ಟನ್ ದಾಟಿದೆ ಎಂದು WGC ಹೇಳಿದೆ. ಇದರ ಪ್ರಮಾಣ 2024 ರಲ್ಲಿ 4,961 ಟನ್, 2023 ರಲ್ಲಿ 4,899 ಟನ್ ಇತ್ತು ಎಂದು ವರದಿ ಹೇಳಿದೆ.

ADVERTISEMENT

ಚಿನ್ನಕ್ಕೆ ಈ ಪರಿ ಬೇಡಿಕೆ ಸೃಷ್ಟಿಯಾಗಿರುವುದಕ್ಕೆ ಇತ್ತೀಚಿನ ದಿನಗಳಲ್ಲಿ ಚಿನ್ನ ಹೂಡಿಕೆದಾರರ ನೆಚ್ಚಿನ ಆಯ್ಕೆಯಾಗಿರುವುದೇ ಕಾರಣ ಎಂದು ವರದಿ ಹೇಳಿದೆ.

2024 ಕ್ಕೆ ಹೋಲಿಸಿಕೊಂಡರೆ ಹೂಡಿಕೆಗಾಗಿಯೇ ಚಿನ್ನ ಖರೀದಿಸಿದ್ದರ ಪ್ರಮಾಣ 2025 ರಲ್ಲಿ ಶೇ 84ರಷ್ಟು ಹೆಚ್ಚಳವಾಗಿದೆ.

ಅಂದರೆ 2025 ರಲ್ಲಿ ಹೂಡಿಕೆಗಾಗಿಯೇ 2,175 ಟನ್ ಚಿನ್ನವನ್ನು ಖರೀದಿಸಲಾಗಿದೆ. 2024 ರಲ್ಲಿ ಇದರ ಪ್ರಮಾಣ 1,115 ಟನ್ ಇತ್ತು.

ಚಿನ್ನದ ಇಟಿಎಫ್‌ಗಳು, ಚಿನ್ನದ ಬಿಸ್ಕತ್ತುಗಳು, ಚಿನ್ನದ ನಾಣ್ಯಗಳ ಮುಖಾಂತರ ಹೂಡಿಕೆದಾರರು ಹೂಡಿಕೆ ಮಾಡುತ್ತಿದ್ದಾರೆ. ಚಿನ್ನದ ಮೇಲೆ ಹೂಡಿಕೆ ಮಾಡುವುದು ವೃತ್ತಿಪರ ಹೂಡಿಕೆದಾರರಿಗೂ ‘ಹಾಟ್ ಫೆವರೀಟ್’ ಆಗಿದೆ. ಬಂಗಾರ ಎಲ್ಲರ ‘ಬಂಗಾರಿ‘ ಆಗಲು ಇದೇ ಪ್ರಮುಖ ಕಾರಣವಾಗಿದೆ ಎಂದು ವರದಿ ಹೇಳಿದೆ.

ಇನ್ನುಳಿದಂತೆ ಯುಎಸ್‌ ಡಾಲರ್‌ನ ಅನಿಶ್ಚಿತತೆ, ಜಾಗತಿಕ ರಾಜಕೀಯ ತಲ್ಲಣಗಳು ಹಾಗೂ ಪ್ರಪಂಚದ ಅನೇಕ ದೇಶಗಳ ಸೆಂಟ್ರಲ್ ಬ್ಯಾಂಕ್‌ಗಳು ಚಿನ್ನದ ಮೀಸಲನ್ನು ಹೆಚ್ಚಿಸುತ್ತಿರುವುದು ಚಿನ್ನದ ದಾಖಲೆಯ ಬೇಡಿಕೆಗೆ ಇತರ ನೇರ ಕಾರಣಗಳಾಗಿವೆ ಎಂದು ತಿಳಿಸಿದೆ.

2025 ರಲ್ಲಿ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಮೀಸಲಿಗಾಗಿ ಒಟ್ಟಾರೆ 825 ಟನ್ ಬಂಗಾರ ಖರೀದಿಸಿವೆ. ಒಂದೇ ವರ್ಷದಲ್ಲಿ 102 ಟನ್ ಚಿನ್ನ ಖರೀದಿಸುವ ಮೂಲಕ ಪೊಲ್ಯಾಂಡ್ ಮೊದಲ ಸ್ಥಾನದಲ್ಲಿದೆ.

ಭಾರತ 2025 ರಲ್ಲಿ ಸುಮಾರು 26 ಟನ್ ಚಿನ್ನದ ಮೀಸಲನ್ನು ಹೊಂದಿತು. ಒಟ್ಟಾರೆ ಸದ್ಯ ಭಾರತದ ಚಿನ್ನದ ಮೀಸಲು 880.5 ಟನ್.

ಇನ್ನು ಹೂಡಿಕೆದಾರರ ಹಾವಳಿಯಿಂದ ಚಿನ್ನದ ಮಾರುಕಟ್ಟೆಯಲ್ಲಿ ಆಭರಣ ಚಿನ್ನದ ಬೇಡಿಕೆ ತಗ್ಗಿದೆ. 2024ಕ್ಕೆ ಹೋಲಿಸಿದರೆ 2025 ರಲ್ಲಿ ಶೇ 18 ರಷ್ಟು ಇಳಿಕೆಯಾಗಿದೆ ಎಂದು ವರದಿ ಹೇಳಿದೆ.

ಬಹಳಷ್ಟು ಜನ ಚಿನ್ನ ಚೆನ್ನ ಎಂದು ಅದರ ಹಿಂದೆ ಓಡುತ್ತಿರುವುದರಿಂದ ಜಾಗತಿಕ ಪೂರೈಕೆಯೂ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. 2025 ರಲ್ಲಿ 3,672 ಟನ್ ಚಿನ್ನವನ್ನು ಉತ್ಪಾದಿಸಲಾಗಿದೆ. ಉಳಿದಿದ್ದು ‘ರಿಸೈಕಲ್‌‘ನಿಂದ ಬಂದಿದ್ದು (ಒಟ್ಟು 5 ಸಾವಿರ ಟನ್) ಎಂದು ವರದಿ ತಿಳಿಸಿದೆ.

2025 ರಲ್ಲಿ ಚಿನ್ನದ ಬೆಲೆ ಗಗನಕ್ಕೇರಿತು. ಇದೀಗ ಮತ್ತೆ ಅದು ರಾಕೆಟ್ ವೇಗದಲ್ಲಿ ಹೊರಟಿದೆ. ಹೂಡಿಕೆದಾರರು ಲಭ್ಯ ಇರುವ ಎಲ್ಲ ಮಾರ್ಗಗಳ ಮುಖಾಂತರ ಚಿನ್ನ ಖರೀದಿಸುತ್ತಿದ್ದಾರೆ ಎಂದು WGCಯ ಹಿರಿಯ ಮಾರುಕಟ್ಟೆ ವಿಶ್ಲೇಷಕ ಲೂಯೀಸ್ ಸ್ಟ್ರೀಟ್ ಪಿಟಿಐಗೆ ತಿಳಿಸಿದ್ದಾರೆ.

2025 ಜನವರಿಯಲ್ಲಿ 10 ಗ್ರಾಂ ಚಿನ್ನದ ಬೆಲೆ ₹84 ಸಾವಿರ ಆಸುಪಾಸು ಇತ್ತು. ಈ ಜನವರಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ₹1.80 ಲಕ್ಷ! ಅಂದರೆ ಒಂದೇ ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಶೇ 100ಕ್ಕೂ ಹೆಚ್ಚು ಪ್ರಮಾಣದಲ್ಲಿ ಏರಿಕೆಯಾಗಿದೆ.

ಚಿನ್ನದ ಬೆಲೆಯಲ್ಲಿ ಇಳಿಕೆಯಾಗುವ ಯಾವುದೇ ಸಂಭವ ಸದ್ಯಕ್ಕಂತೂ ಇಲ್ಲ. ಜಾಗತಿಕ ಅಸ್ಥಿರತೆಗಳೂ ನಿಲ್ಲುವ ಸೂಚನೆ ಕಾಣುತ್ತಿಲ್ಲ. 2026 ರಲ್ಲಿ ಇನ್ನೂ ಹೆಚ್ಚು ಪ್ರಮಾಣದಲ್ಲಿ ಚಿನ್ನ ಬೆಲೆ ಹೆಚ್ಚಿಸಿಕೊಳ್ಳಲಿದೆ ಎಂದು ಲೂಯೀಸ್ ಸ್ಟ್ರೀಟ್ ಭವಿಷ್ಯ ನುಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.