
ಚಿನ್ನ
ಬೆಂಗಳೂರು: 2026ರ ಕ್ಯಾಲೆಂಡರ್ ವರ್ಷದಲ್ಲಿ ಚಿನ್ನದ ಬೆಲೆಯು ಈಗಿನ ಮಟ್ಟದಿಂದ ಶೇಕಡ 30ರವರೆಗೆ ಹೆಚ್ಚಳ ಕಾಣುವ ಸಾಧ್ಯತೆ ಇದೆ ಎಂದು ವಿಶ್ವ ಚಿನ್ನ ಸಮಿತಿಯು (ಡಬ್ಲ್ಯುಜಿಸಿ) ಅಂದಾಜು ಮಾಡಿದೆ.
ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ 2026ರಲ್ಲಿ ಏನಾಗಬಹುದು, ಅದರ ಪರಿಣಾಮವಾಗಿ ಚಿನ್ನ ಬೆಲೆಯು ಯಾವ ಮಟ್ಟವನ್ನು ತಲುಪಬಹುದು ಎಂಬುದನ್ನು ಡಬ್ಲ್ಯುಜಿಸಿ ತನ್ನ 2026ನೇ ಸಾಲಿನ ‘ಚಿನ್ನದ ಮುನ್ನೋಟ’ ವರದಿಯಲ್ಲಿ ಅಂದಾಜಿಸಿದೆ.
ಜಾಗತಿಕ ಅರ್ಥ ವ್ಯವಸ್ಥೆಯ ಬೆಳವಣಿಗೆಯು ಮಂದಗತಿಗೆ ತಿರುಗುವ ಸಾಧ್ಯತೆ ಇದ್ದೇ ಇದೆ. ಜಾಗತಿಕ ಮಟ್ಟದ ರಾಜಕೀಯ ಹಾಗೂ ಆರ್ಥಿಕ ಅಪಾಯಗಳು ಇದಕ್ಕೆ ಕಾರಣವಾಗಬಹುದು. ವ್ಯಾಪಾರಕ್ಕೆ ಸಂಬಂಧಿಸಿದ ಬಿಕ್ಕಟ್ಟು, ಇತ್ಯರ್ಥ ಕಾಣದ ಪ್ರಾದೇಶಿಕ ಬಿಕ್ಕಟ್ಟುಗಳು ಅಥವಾ ಹೊಸ ಸಮಸ್ಯೆಯು ವಿಶ್ವಾಸವನ್ನು ಕುಗ್ಗಿಸಬಹುದು. ಹೀಗೆ ಆದಾಗ ಉದ್ದಿಮೆಗಳು ಹೂಡಿಕೆಯನ್ನು ಕಡಿಮೆ ಮಾಡುತ್ತವೆ, ಕುಟುಂಬಗಳ ಮಟ್ಟದಲ್ಲಿ ಖರ್ಚನ್ನು ಕಡಿಮೆ ಮಾಡಲಾಗುತ್ತದೆ ಎಂದು ಡಬ್ಲ್ಯುಜಿಸಿ ತನ್ನ ವರದಿಯಲ್ಲಿ ವಿವರಣೆ ನೀಡಿದೆ.
ಈ ಬಗೆಯ ಸಂದರ್ಭ ಸೃಷ್ಟಿಯಾದಾಗ, ಅಮೆರಿಕದಲ್ಲಿ ಹಣದುಬ್ಬರವು ಗುರಿಗಿಂತ ಕಡಿಮೆ ಮಟ್ಟಕ್ಕೆ ಬಂದು ಅಲ್ಲಿನ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ತೀವ್ರವಾಗಿ ಇಳಿಕೆ ಮಾಡಬಹುದು. ಇವೆಲ್ಲ ಸಂಗತಿಗಳ ಒಟ್ಟು ಫಲಿತಾಂಶವಾಗಿ, ಚಿನ್ನದ ಬೆಲೆ ತೀವ್ರವಾಗಿ ಹೆಚ್ಚಲು ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಆಗ ಚಿನ್ನದ ಬೆಲೆಯು ಈಗಿನ ಮಟ್ಟದಿಂದ ಶೇ 15ರಿಂದ ಶೇ 30ರವರೆಗೆ ಏರಿಕೆ ಕಾಣಬಹುದು ಎಂದು ಅದು ವಿವರ ನೀಡಿದೆ.
ಚಿನ್ನದ ಬೆಲೆಯು ಗರಿಷ್ಠ ಶೇ 20ರವರೆಗೆ ಕುಸಿಯುವ ಸಾಧ್ಯತೆಯ ಬಗ್ಗೆಯೂ ಡಬ್ಲ್ಯುಜಿಸಿ ತನ್ನ ವರದಿಯಲ್ಲಿ ವಿವರ ನೀಡಿದೆ.
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತದ ನೀತಿಗಳು ಯಶಸ್ಸು ಕಾಣಬಹುದು. ಹೀಗಾದಾಗ ಅಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಆರ್ಥಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಜಾಗತಿಕ ಆರ್ಥಿಕ ಬೆಳವಣಿಗೆಯು ಹೆಚ್ಚು ಸ್ಥಿರವಾದ ಹಾದಿಗೆ ಮರಳಬಹುದು. ಹಣದುಬ್ಬರದ ಒತ್ತಡ ಹೆಚ್ಚಾದಾಗ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಹೆಚ್ಚಿಸಲೂಬಹುದು. ಇದರಿಂದಾಗಿ ಡಾಲರ್ ಬಲಗೊಳ್ಳಬಹುದು.
ಡಾಲರ್ ಬಲವರ್ಧನೆ, ಹೂಡಿಕೆದಾರರು ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಿದ್ಧವಾಗುವುದು ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತವೆ. ರಿಟೇಲ್ ಬೇಡಿಕೆ ಕಡಿಮೆಯಾಗುವುದು ಸೇರಿದಂತೆ ಬೇರೆ ಬೇರೆ ಕಾರಣಗಳಿಂದಾಗಿ ಚಿನ್ನದ ಬೆಲೆಯು ಶೇ 5ರಿಂದ ಶೇ 20ರವರೆಗೆ ಇಳಿಕೆ ಕಾಣುವ ಸಾಧ್ಯತೆಯೂ ಇದೆ ಎಂದು ವರದಿಯು ಹೇಳಿದೆ.
ಚಿನ್ನವು ದೀರ್ಘಾವಧಿಯಲ್ಲಿ ಬಹಳ ಸ್ಥಿರವಾದ ಅರ್ಥಪೂರ್ಣವಾದ ಆಸ್ತಿಯಾಗಿ ಇರುತ್ತದೆ. ಅಲ್ಪಾವಧಿಯ ಬೆಲೆ ಏರಿಳಿತದ ಆಚೆಗೆ ಗಮನ ನೀಡಿ ಜನರು ಚಿನ್ನದ ಮೌಲ್ಯವನ್ನು ಅರ್ಥ ಮಾಡಿಕೊಳ್ಳಬೇಕು.– ರಮೇಶ್ ಕಲ್ಯಾಣರಾಮನ್ ಕಲ್ಯಾಣ್ ಜುವೆಲರ್ಸ್‌ನ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.