ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆ ದಿಕ್ಕು, ಕರೆನ್ಸಿ ಅಸ್ಥಿರತೆ ಹಾಗೂ ಭೂಗೋಳ ರಾಜಕೀಯ ಅನಿಶ್ಚಿತತೆಯೇ ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆಗೆ ಕಾರಣ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
ಅಲ್ಲದೆ ಚಿನ್ನ ಹಾಗೂ ಬೆಳ್ಳಿಯ ಚಿಲ್ಲರೆ ದರ ನಿಯಂತ್ರಣಕ್ಕೆ ಯಾವುದೇ ಪ್ರಸ್ತಾಪ ಕೂಡ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದೆ.
ಚಿನ್ನ ಹಾಗೂ ಬೆಳ್ಳಿ ದರ ಗಣನೀಯವಾಗಿ ಏರಿಕೆಯಾಗಲು ಕಾರಣ ಏನು ಎಂದು ಡಿಎಂಕೆ ಸಂಸದರಾದ ತಿರು ಅರುಣ್ ನೆಹರೂ ಹಾಗೂ ಸುಧಾ ಆರ್. ಅವರು ಲೋಕಸಭೆಯಲ್ಲಿ ಕೇಳಿದ ಚುಕ್ಕೆ ಗುರುತು ಅಲ್ಲದ ಪ್ರಶ್ನೆಗೆ ಸರ್ಕಾರ ಹೀಗೆ ಉತ್ತರಿಸಿದೆ.
ಚಿನ್ನ ಬೆಲೆ ಏರಿಕೆಯಿಂದ ಚಿನ್ನವು ಬಲವಾದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಮಹತ್ವವನ್ನು ಹೊಂದಿರುವ ತಮಿಳುನಾಡಿನಂತಹ ರಾಜ್ಯಗಳಲ್ಲಿ ಹಬ್ಬ ಹಾಗೂ ಮದುವೆ ಋತುವಿನಲ್ಲಿ ಕುಟುಂಬಗಳು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಇದೆಯೇ ಎಂದೂ ಸಂಸದರು ಕೇಳಿದ್ದಾರೆ.
ಚಿನ್ನದ ಬೆಲೆ ನಿಯಂತ್ರಣಕ್ಕೆ ಹಾಗೂ ಸ್ಥಿರತೆಗೆ ಸರ್ಕಾರ ತೆಗೆದುಕೊಂಡಿರುವ ಕ್ರಮ ಅಥವಾ ಸರ್ಕಾರದ ಮುಂದಿರುವ ಪ್ರಸ್ತಾಪವೇನು? ಆಮದು ಶುಲ್ಕ ಇಳಿಕೆ, ತೆರಿಗೆ ತರ್ಕಬದ್ಧಗೊಳಿಸುವ ಅಥವಾ ಚಿನ್ನ ಕೈಗೆಟುಕವಂತೆ ಮಾಡಲು ಸಹಾಯಧನ ಅಥವಾ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವ ಇರಾದೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಹಣಕಾಸು ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌದರಿ, ಚಿನ್ನ ಹಾಗೂ ಬೆಳ್ಳಿ ದೇಶಿಯ ದರ ಅಂತರರಾಷ್ಟ್ರೀಯ ಮಾರುಕಟ್ಟೆ ಹಾಗೂ ರೂಪಾಯಿ–ಡಾಲರ್ ವಿನಿಮಯ ದರ ಹಾಗೂ ಇತರ ತೆರಿಗೆಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದಾರೆ.
ಹೆಚ್ಚುತ್ತಿರುವ ಭೂಗೋಳ ರಾಜಕೀಯ ಅಸ್ಥಿರತೆ ಹಾಗೂ ಜಾಗತಿಕ ಬೆಳವಣಿಗೆ ಅನಿಶ್ಚಿತತೆ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಗೆ ಕಾರಣವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲಾಗುವ ಪರಿಣಾಮದ ಬಗ್ಗೆ ಉತ್ತರಿಸಿದ ಅವರು, ಬೆಲೆ ಏರಿಕೆಯು ರಾಜ್ಯಗಳು ಮತ್ತು ಜನಸಂಖ್ಯಾ ಗುಂಪುಗಳಲ್ಲಿ ಚಿನ್ನದ ಮೇಲಿನ ಸಾಮಾಜಿಕ-ಸಾಂಸ್ಕೃತಿಕ ಮತ್ತು ಆರ್ಥಿಕ ಅವಲಂಬನೆಯನ್ನು ಅವಲಂಬಿಸಿ ವಿಭಿನ್ನ ಪರಿಣಾಮಗಳನ್ನು ಬೀರಬಹುದು ಎಂದು ಹೇಳಿದ್ದಾರೆ. ಚಿನ್ನ ಹಾಗೂ ಬೆಳ್ಳಿ ಎರಡೂ ಬಳಕೆ ಹಾಗೂ ಹೂಡಿಕೆ ವಸ್ತುಗಳು ಹೌದು. ಬೆಲೆ ಏರಿಕೆಯು ಗೃಹಬಳಕೆಯ ಹಿಡುವಳಿಗಳ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಚಿನ್ನದ ಬೆಲೆಯನ್ನು ಸರ್ಕಾರ ನಿಯಂತ್ರಿಸುವುದಿಲ್ಲ. ಆದರೆ ಗ್ರಾಹಕರಿಗೆ ಪರಿಹಾರ ಕ್ರಮವಾಗಿ ಚಿನ್ನದ ಮೇಲೆ ಆಮದು ಶುಲ್ಕವನ್ನು ಜುಲೈ 2024ರಲ್ಲಿ ಶೇ 15 ರಿಂದ 6ಕ್ಕೆ ಇಳಿಸಲಾಗಿದೆ ಎಂದಿದ್ದಾರೆ.
ಚಿನ್ನ ನಗದೀಕರಣ ಯೋಜನೆ, ಚಿನ್ನದ ಬಾಂಡ್‌ಗಳು, ಚಿನ್ನ ವಿನಿಮಯ ವ್ಯವಹಾರ ನಿಧಿ (ಇಎಫ್‌ಟಿ) ಮುಂತಾದವುಗಳು ಭೌತಿಕ ಚಿನ್ನದ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ನಾಮನಿರ್ದೇಶಿತ ಏಜೆನ್ಸಿಗಳು, ಬ್ಯಾಂಕುಗಳು ಮತ್ತು ಸಂಸ್ಕರಣಾಗಾರಗಳ ಮೂಲಕ ಬೆಳ್ಳಿಯ ಆಮದು ನಿಯಂತ್ರಣವು ಪಾರದರ್ಶಕತೆಯನ್ನು ಹೆಚ್ಚಿಸಿದೆ ಮತ್ತು ಕಪ್ಪು ಮಾರುಕಟ್ಟೆಯನ್ನು ನಿಯಂತ್ರಿಸಿದೆ ಎಂದು ಅವರು ಉತ್ತರದಲ್ಲಿ ಹೇಳಿದ್ದಾರೆ.
ಚಿನ್ನ ಹಾಗೂ ಬೆಳ್ಳಿಯ ದರ ಮಾರುಕಟ್ಟೆ ಪ್ರಭಾವಕ್ಕೆ ಒಳಗಾಗುವುದರಿಂದ ಅವುಗಳನ್ನು ನಿಯಂತ್ರಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
(ಆಧಾರ: ಲೋಕಸಭೆಯ ವೆಬ್‌ಸೈಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.