
ಮೈಸೂರಿನ ಚಿನ್ನಾಭರಣ ಮಳಿಗೆಯೊಂದರಲ್ಲಿ ಯುವತಿಯರು ಚಿನ್ನ ಖರೀದಿಸಿದರು.
–ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಬೆಂಗಳೂರು: ಬೆಂಗಳೂರಿನ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಕೆ.ಜಿ ಬೆಳ್ಳಿ ಧಾರಣೆಯು ₹3 ಲಕ್ಷ ದಾಟಿದೆ. 24 ಕ್ಯಾರಟ್ ಪರಿಶುದ್ಧ ಚಿನ್ನದ ಬೆಲೆ 10 ಗ್ರಾಂ ಗೆ ₹1.50 ಲಕ್ಷಕ್ಕೆ ತಲುಪಿದೆ.
ಇದು ಚಿನ್ನ ಹಾಗೂ ಬೆಳ್ಳಿಯ ಈವರೆಗಿನ ದಾಖಲೆಯ ಬೆಲೆಯಾಗಿದೆ.
2024ರ ಜನವರಿ 19ರಂದು ಬೆಂಗಳೂರಿನಲ್ಲಿ ಕೆ.ಜಿ ಬೆಳ್ಳಿ ಬೆಲೆ ₹73 ಸಾವಿರ ಆಗಿತ್ತು. 2025ರ ಜನವರಿ 20ಕ್ಕೆ ₹96,200ಕ್ಕೆ ತಲುಪಿತು. ಈಗ (2026ರ ಜನವರಿ 19) ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆಯು ₹3,07,900ಕ್ಕೆ ಜಿಗಿದಿದೆ.
ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆಯು ಕೆ.ಜಿ.ಗೆ ₹3.5 ಲಕ್ಷಕ್ಕೂ ಏರಿಕೆ ಆಗಬಹುದು ಎಂದು ಬೆಂಗಳೂರು ಜ್ಯುವೆಲರ್ಸ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ವೆಂಕಟೇಶ್ ಬಾಬು ಹೇಳಿದರು.
‘ಚೀನಾವು ಜಗತ್ತಿನಲ್ಲಿ ಅತಿ ಹೆಚ್ಚು ಬೆಳ್ಳಿ ಉತ್ಪಾದಿಸುವ ರಾಷ್ಟ್ರಗಳ ಪೈಕಿ ಒಂದಾಗಿದ್ದು, ಬೆಳ್ಳಿ ರಫ್ತು ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಯಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚುತ್ತಿದೆ, ಜಾಗತಿಕ ಮಟ್ಟದಲ್ಲಿನ ಅನಿಶ್ಚಿತತೆಗಳಿಂದಾಗಿ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ಬಳಿ ಇರುವ ಕರೆನ್ಸಿಯನ್ನು ಮಾರಾಟ ಮಾಡಿ, ಚಿನ್ನ ಮತ್ತು ಬೆಳ್ಳಿ ಖರೀದಿಸಲು ಮುಂದಾಗುತ್ತಿವೆ. ಇವೆಲ್ಲವೂ ದರ ಏರಿಕೆಗೆ ಕಾರಣವಾಗಿವೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬೆಳ್ಳಿ ಪೂರೈಕೆಯಲ್ಲಿ ಸದ್ಯಕ್ಕೆ ಕೊರತೆ ಉಂಟಾಗಿಲ್ಲ’ ಎಂದು ತಿಳಿಸಿದರು.
‘ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ಬೆಳ್ಳಿ ಉತ್ಪಾದನೆ ಇಲ್ಲ. ಇದು ಬೆಳ್ಳಿ ಧಾರಣೆ ಹೆಚ್ಚಳಕ್ಕೆ ಪ್ರಮುಖ ಕಾರಣ’ ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಸಂಶೋಧನಾ (ಸರಕು) ವಿಭಾಗದ ಮುಖ್ಯಸ್ಥ ಹರೀಶ್ ವಿ. ತಿಳಿಸಿದರು.
ಬೆಳ್ಳಿ ಗಣಿಗಳಲ್ಲಿ ಉತ್ಪಾದನೆ ಹೆಚ್ಚಾಗಿಲ್ಲ. ಬೆಳ್ಳಿಯ ಮರುಬಳಕೆ ಪ್ರಮಾಣ ಕಡಿಮೆ ಇದೆ. ಹಬ್ಬ ಮತ್ತು ಮದುವೆ ಋತು ಅಂಗವಾಗಿ ಬೇಡಿಕೆ ಹೆಚ್ಚಾಗಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ ಆಗುತ್ತಿರುವುದರಿಂದ ಆಮದು ಮೌಲ್ಯ ದುಬಾರಿಯಾಗುತ್ತಿದೆ. ಇದು ಬೆಳ್ಳಿ ಬೆಲೆಯನ್ನು ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿಸಿದೆ ಎಂದರು.
‘ವಿದ್ಯುತ್ ಚಾಲಿತ ವಾಹನಗಳು, ಸೌರಫಲಕಗಳು, ಸುಧಾರಿತ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಬೆಳ್ಳಿ ಬಳಕೆ ಹೆಚ್ಚಿದೆ. ಅಲ್ಲದೆ, ಬೆಳ್ಳಿಗೆ ಕೈಗಾರಿಕೆಗಳಲ್ಲಿ ಬೇಡಿಕೆ ಹೆಚ್ಚಾಗಿರುವುದು, ವಿವಿಧ ದೇಶಗಳಲ್ಲಿ ನಡೆಯುತ್ತಿರುವ ಯುದ್ಧಗಳ ಕಾರಣಕ್ಕೆ ಸೃಷ್ಟಿಯಾಗಿರುವ ಬಿಕ್ಕಟ್ಟಿನಿಂದ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಹೆಚ್ಚಳವಾಗಬಹುದು ಎಂದು ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಬೆಳ್ಳಿ ಖರೀದಿಗೆ ಮುಂದಾಗಿದ್ದಾರೆ. ಇದು ಬೆಲೆ ಏರಿಕೆಗೆ ಕಾರಣ’ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಜತಿನ್ ತ್ರಿವೇದಿ ತಿಳಿಸಿದರು.
ಜಾಗತಿಕ ಮಟ್ಟದ ರಾಜಕೀಯ ವಿದ್ಯಮಾನಗಳು, ಡಾಲರ್ ಎದುರು ರೂಪಾಯಿ ಮೌಲ್ಯ ಇಳಿಕೆ ಸೇರಿದಂತೆ ವಿವಿಧ ಕಾರಣಗಳು ಚಿನ್ನದ ದರದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿವೆ ಎಂದು ಬೆಂಗಳೂರಿನ ಜ್ಯುವೆಲರ್ಸ್ ಅಸೋಸಿಯೇಷನ್‌ನ ಕಾರ್ಯದರ್ಶಿ ಆರ್. ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.