ADVERTISEMENT

ಗೋಧಿ ಹಿಟ್ಟು, ಮೈದಾ, ರವೆ ರಫ್ತು ನಿರ್ಬಂಧಿಸಿದ ಕೇಂದ್ರ ಸರ್ಕಾರ

ಪಿಟಿಐ
Published 28 ಆಗಸ್ಟ್ 2022, 5:28 IST
Last Updated 28 ಆಗಸ್ಟ್ 2022, 5:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಗೋಧಿ ಹಿಟ್ಟು, ಮೈದಾ, ರವೆ ಮತ್ತು ತವಡು ತೆಗೆಯದ ಗೋಧಿ ಹಿಟ್ಟಿನ ರಫ್ತನ್ನು ಭಾರತ ಶನಿವಾರ ನಿಷೇಧಿಸಿದೆ. ಬೆಲೆ ಏರಿಕೆ ನಿಯಂತ್ರಿಸುವ ಕ್ರಮವಾಗಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಈ ಹಿಂದೆ ಮೇನಲ್ಲಿ ಗೋಧಿ ರಫ್ತನ್ನೂ ಸರ್ಕಾರ ನಿರ್ಬಂಧಿಸಿತ್ತು.

ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ಪ್ರಕಟಿಸಿದ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ), ‘ಕೆಲ ವಿಶೇಷ ಸಂದರ್ಭಗಳಲ್ಲಿ ಕೇಂದ್ರದ ಅನುಮತಿ ಪಡೆದು ಈ ವಸ್ತುಗಳ ರಫ್ತಿಗೆ ಅನುಮತಿ ನೀಡಲಾಗುತ್ತದೆ’ ಎಂದು ಹೇಳಿತು.

ಸರಕುಗಳ ಬೆಲೆ ಏರಿಕೆ ತಡೆಯಲು ಆಗಸ್ಟ್ 25 ರಂದು ಗೋಧಿ ಅಥವಾ ಮೆಸ್ಲಿನ್ ಹಿಟ್ಟಿನ ರಫ್ತಿನ ಮೇಲೆ ನಿರ್ಬಂಧಗಳನ್ನು ಹಾಕಲು ಸರ್ಕಾರ ನಿರ್ಧರಿಸಿತ್ತು. ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ADVERTISEMENT

ರಫ್ತು ನಿರ್ಬಂಧಗಳು ಅಥವಾ ನಿಷೇಧದಿಂದ ಗೋಧಿ ಅಥವಾ ಮೆಸ್ಲಿನ್ ಹಿಟ್ಟಿಗೆ ವಿನಾಯಿತಿ ನೀಡುವ ನೀತಿಗೆ ತಿದ್ದುಪಡಿ ತರುವ ಪ್ರಸ್ತಾಪವನ್ನು ಕ್ಯಾಬಿನೆಟ್ ಸಮಿತಿಯು ಅನುಮೋದಿಸಿದೆ ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಷ್ಯಾ ಮತ್ತು ಉಕ್ರೇನ್ ಗೋಧಿಯ ಪ್ರಮುಖ ರಫ್ತುದಾರ ರಾಷ್ಟ್ರಗಳಾಗಿದ್ದು, ಜಾಗತಿಕ ಗೋಧಿ ಮಾರುಕಟ್ಟೆಯ ಸುಮಾರು ನಾಲ್ಕನೇ ಒಂದು ಭಾಗವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿವೆ. ಉಭಯ ದೇಶಗಳ ನಡುವಿನ ಯುದ್ಧವು ಜಾಗತಿಕ ಗೋಧಿ ಪೂರೈಕೆ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಭಾರತದ ಗೋಧಿಗೆ ಬೇಡಿಕೆ ಹೆಚ್ಚುತ್ತಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.