ನವದೆಹಲಿ: ಗ್ರಾಹಕರ ಹಿತರಕ್ಷಣೆ ದೃಷ್ಟಿಯಿಂದ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧರಿತ ಸಹಾಯವಾಣಿ ಸೇರಿ ಇ–ಕಾಮರ್ಸ್ ಸುರಕ್ಷತಾ ಕ್ರಮಗಳಿಗೆ ಕೇಂದ್ರ ಆಹಾರ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು, ಮಂಗಳವಾರ ನಡೆದ ರಾಷ್ಟ್ರೀಯ ಗ್ರಾಹಕ ದಿನಾಚರಣೆಯಲ್ಲಿ ಚಾಲನೆ ನೀಡಿದರು.
ಎಐ ಆಧರಿತ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ, ಇ–ಮ್ಯಾಪ್ ಪೋರ್ಟಲ್ ಹಾಗೂ ‘ಜಾಗೋ ಗ್ರಾಹಕ ಜಾಗೋ’ ಮೊಬೈಲ್ ಅಪ್ಲಿಕೇಷನ್‌ಗೆ ಚಾಲನೆ ಸಿಕ್ಕಿದೆ. ಗ್ರಾಹಕರ ರಕ್ಷಣೆಗಾಗಿ ಸರ್ಕಾರದ ಈ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು ರಿಲಯನ್ಸ್ ರಿಟೇಲ್, ಟಾಟಾ ಸನ್ಸ್ ಮತ್ತು ಜೊಮಾಟೊ ಕಂಪನಿ ಪ್ರತಿಜ್ಞೆ ಸ್ವೀಕರಿಸಿವೆ.
ಗ್ರಾಹಕರ ವಿವಾದಗಳ ತ್ವರಿತ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಸರ್ಕಾರ ಅಗತ್ಯ ಕ್ರಮವಹಿಸಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.
ಪ್ರಸ್ತುತ ಡಿಜಿಟಲ್ ಕ್ರಾಂತಿಯಿಂದಾಗಿ ಸಾಕಷ್ಟು ಅವಕಾಶಗಳು ಲಭಿಸುತ್ತಿವೆ. ಗ್ರಾಹಕರು ಆತ್ಮವಿಶ್ವಾಸದಿಂದ ತಮ್ಮ ಇಚ್ಛೆಗೆ ಅನುಸಾರ ಆಯ್ಕೆ ಮಾಡಿಕೊಳ್ಳುವ ವಾತಾವರಣ ಸೃಷ್ಟಿಸಲು ಸರ್ಕಾರ ಕ್ರಮವಹಿಸಿದೆ ಎಂದು ಹೇಳಿದ್ದಾರೆ.
ಗ್ರಾಹಕರನ್ನು ದಾರಿ ತಪ್ಪಿಸುವ ಜಾಹೀರಾತುಗಳಿಗೆ ಕಡಿವಾಣ ಹಾಕುವ ಬಗ್ಗೆ ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರವು (ಸಿಸಿಪಿಎ) ಹೊಸ ಕರಡು ನಿಯಮಾವಳಿಗಳನ್ನು ರೂಪಿಸುತ್ತಿದೆ. ಹಾಲಿ ಇರುವ ನಿಯಮಾವಳಿಗಳನ್ನು ಉಲ್ಲಂಘಿಸಿರುವ 13 ಕಂಪನಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ದೂರು ಇತ್ಯರ್ಥ: ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಸಕ್ತ ವರ್ಷದ ಜನವರಿಯಿಂದ ನವೆಂಬರ್ ಅಂತ್ಯದವರೆಗೆ 3,628 ದೂರುಗಳನ್ನು ಸ್ವೀಕರಿಸಲಾಗಿದೆ. ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 6,587 ವಿವಾದಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಗ್ರಾಹಕರು ದೇಶದ ಯಾವುದೇ ಸ್ಥಳದಿಂದ ದೂರು ಸಲ್ಲಿಸಲು ಅನುಕೂಲವಾಗುವಂತೆ 2020ರಲ್ಲಿ ಇ-ದಖಿಲ್ ಪೋರ್ಟಲ್ ಆರಂಭಿಸಲಾಯಿತು. ಕಳೆದ ವರ್ಷದ ಜೂನ್‌ನಲ್ಲಿ ಇದನ್ನು ದೇಶದಾದ್ಯಂತ ವಿಸ್ತರಿಸಲಾಯಿತು. ಇದರ ಅಳವಡಿಕೆಯಲ್ಲಿ ಕರ್ನಾಟಕ, ಪಂಜಾಬ್ ಹಾಗೂ ರಾಜಸ್ಥಾನ ಉತ್ತಮ ಸಾಧನೆ ಮಾಡಿವೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.