ADVERTISEMENT

ಜಿಎಸ್‌ಟಿ: ₹1.96 ಲಕ್ಷ ಕೋಟಿ ಸಂಗ್ರಹ

ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಶೇಕಡ 4.6ರಷ್ಟು ಹೆಚ್ಚಳ: ಕೇಂದ್ರ ಸರ್ಕಾರ

ಪಿಟಿಐ
Published 1 ನವೆಂಬರ್ 2025, 23:30 IST
Last Updated 1 ನವೆಂಬರ್ 2025, 23:30 IST
   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ಅಕ್ಟೋಬರ್‌ ತಿಂಗಳಿನಲ್ಲಿ ₹1.96 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ. 

2024ರ ಅಕ್ಟೋಬರ್‌ನಲ್ಲಿ ₹1.87 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ಅಕ್ಟೋಬರ್‌ ವರಮಾನ ಸಂಗ್ರಹದಲ್ಲಿ ಶೇ 4.6ರಷ್ಟು ಹೆಚ್ಚಳವಾಗಿದೆ. 

ಒಟ್ಟು ಜಿಎಸ್‌ಟಿ ಸಂಗ್ರಹದ ಪೈಕಿ, ದೇಶದ ಆಂತರಿಕ ವಹಿವಾಟುಗಳಿಂದ ಬರುವ ಜಿಎಸ್‌ಟಿ ವರಮಾನವು ಶೇ 2ರಷ್ಟು ಏರಿಕೆ ಕಂಡಿದ್ದು, ₹1.45 ಲಕ್ಷ ಕೋಟಿಯಾಗಿದೆ. ಆಮದು ಮಾಡಿಕೊಂಡ ಸರಕುಗಳಿಂದ ಬಂದ ವರಮಾನವು ₹50,884 ಕೋಟಿಯಾಗಿದ್ದು, ಶೇ 13ರಷ್ಟು ಏರಿಕೆಯಾಗಿದೆ. ಜಿಎಸ್‌ಟಿ ಮರುಪಾವತಿಯಲ್ಲಿ ಶೇ 39.6ರಷ್ಟು ಏರಿಕೆಯಾಗಿದ್ದು, ₹26,934 ಕೋಟಿಯಾಗಿದೆ. ನಿವ್ವಳ ಜಿಎಸ್‌ಟಿ ಸಂಗ್ರಹವು ₹1.69 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.

ADVERTISEMENT

ಸೆಪ್ಟೆಂಬರ್‌ 22ರಿಂದ ಜಾರಿಗೆ ಬರುವಂತೆ ಜಿಎಸ್‌ಟಿ ಮಂಡಳಿಯು 375ಕ್ಕೂ ಹೆಚ್ಚು ವಸ್ತುಗಳ ಮೇಲಿನ ಜಿಎಸ್‌ಟಿ ಇಳಿಕೆ ಮಾಡಿತ್ತು. ‌ಅಕ್ಟೋಬರ್‌ನಲ್ಲಿನ ಜಿಎಸ್‌ಟಿ ಸಂಗ್ರಹವು ಹಬ್ಬದ ಋತುವಿನಲ್ಲಿನ ಮಾರಾಟ ಮತ್ತು ಸರಕುಗಳಿಗೆ ಹೆಚ್ಚಿದ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ.

ಪ್ರಸಕ್ತ ಆರ್ಥಿಕ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹವು ಕ್ರಮವಾಗಿ ಶೇ 6.5 ಮತ್ತು ಶೇ 9.1ರಷ್ಟು ಹೆಚ್ಚಾಗಿ ₹1.86 ಲಕ್ಷ ಕೋಟಿ ಮತ್ತು ₹1.89 ಲಕ್ಷ ಕೋಟಿಗೆ ತಲುಪಿತ್ತು. ಜಿಎಸ್‌ಟಿ ದರ ಕಡಿತಗೊಳಿಸಿದ ನಂತರ ಅಕ್ಟೋಬರ್‌ನಲ್ಲಿ ವರಮಾನದ ಬೆಳವಣಿಗೆಯಲ್ಲಿ ನಿಧಾನಗತಿ ಕಂಡು ಬಂದಿದೆ. 

‘ಹಬ್ಬದ ಋತುವಿಗೆ ಮುಂಚಿತವಾಗಿ ಜಿಎಸ್‌ಟಿ ದರ ಇಳಿಕೆ ಆಗಲಿರುವುದರಿಂದ ಗ್ರಾಹಕರು ಖರ್ಚು ಮಾಡುವುದನ್ನು ಮುಂದೂಡಿದರು. ಇದರಿಂದ ಜಿಎಸ್‌ಟಿ ಸಂಗ್ರಹದಲ್ಲಿ ಮಂದಗತಿ ಉಂಟಾಗಿದೆ. ಮುಂದಿನ ತಿಂಗಳಿನಲ್ಲಿ ಸಂಗ್ರಹವು ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದು ಇವೈ ಇಂಡಿಯಾ ತೆರಿಗೆ ಪಾಲುದಾರ ಸೌರಭ್ ಅಗರವಾಲ್ ಹೇಳಿದ್ದಾರೆ.

ಕರ್ನಾಟಕ: ಶೇ 10ರಷ್ಟು ಬೆಳವಣಿಗೆ

ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ₹13081 ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಅದು ಈ ವರ್ಷದ ಅಕ್ಟೋಬರ್‌ನಲ್ಲಿ ₹14395 ಕೋಟಿಗೆ ಏರಿಕೆಯಾಗಿದ್ದು ಶೇ 10ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಇದು ರಾಷ್ಟ್ರೀಯ ಸರಾಸರಿ ಬೆಳವಣಿಗೆ ದರಕ್ಕಿಂತ (ಶೇ 2ರಷ್ಟು) ಹೆಚ್ಚು. ದೇಶದ ದೊಡ್ಡ ರಾಜ್ಯಗಳ ಪೈಕಿ ಜಿಎಸ್‌ಟಿ ಸಂಗ್ರಹದಲ್ಲಿ ಗರಿಷ್ಠ ಬೆಳವಣಿಗೆ ದಾಖಲಿಸಿದ ಶ್ರೇಯ ಕರ್ನಾಟಕದ್ದು. ತೆಲಂಗಾಣವು ಶೇ 10ರಷ್ಟು (₹5211 ಕೋಟಿಯಿಂದ ₹5726 ಕೋಟಿಯಷ್ಟು) ಜಿಎಸ್‌ಟಿ ಸಂಗ್ರಹ ಬೆಳವಣಿಗೆ ದರ ದಾಖಲಿಸಿದೆ. ಮಹಾರಾಷ್ಟ್ರವು ಅತಿ ಹೆಚ್ಚು ₹32025 ಕೋಟಿ ಜಿಎಸ್‌ಟಿ ಸಂಗ್ರಹಿಸಿದ ರಾಜ್ಯ ಎನಿಸಿದೆ. ಆದರೆ ಕಳೆದ ಅಕ್ಟೋಬರ್‌ಗೆ ಹೋಲಿಸಿದರೆ ಈ ಸಾಲಿನ ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ಬೆಳವಣಿಗೆ ದರ ಶೇ 3ರಷ್ಟು ಮಾತ್ರ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.