ADVERTISEMENT

ಹೊರ್ಮುಜ್‌ ಜಲಸಂಧಿ ಮುಚ್ಚಿದ ಇರಾನ್‌: ಭಾರತಕ್ಕೆ ತಕ್ಷಣಕ್ಕೆ ಇಲ್ಲ ತೈಲ ಸಮಸ್ಯೆ

ಬಿಕ್ಕಟ್ಟು ಮುಂದುವರಿದರೆ ರಷ್ಯಾ ಸೇರಿದಂತೆ ಬೇರೆ ದೇಶಗಳಿಂದ ಆಮದು

ಪಿಟಿಐ
Published 1 ಮಾರ್ಚ್ 2026, 15:31 IST
Last Updated 1 ಮಾರ್ಚ್ 2026, 15:31 IST
ಹಾರ್ಮುಜ್‌ ಜಲಸಂಧಿ
ಹಾರ್ಮುಜ್‌ ಜಲಸಂಧಿ   

ನವದೆಹಲಿ: ಭಾರತದಲ್ಲಿನ ತೈಲ ಸಂಗ್ರಹವು ಇನ್ನೂ 15ರಿಂದ 17 ದಿನ ಬಳಕೆಗೆ ಬರುವಷ್ಟಿದೆ, ಹೊರ್ಮುಜ್‌ ಜಲಸಂಧಿಯನ್ನು ಮುಚ್ಚಲಾಗಿದ್ದರೂ ಭಾರತಕ್ಕೆ ತಕ್ಷಣಕ್ಕೆ ತೊಂದರೆ ಆಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ತೀವ್ರಗೊಂಡರೆ ಕೇಂದ್ರ ಸರ್ಕಾರವು ಇಂಧನ ಆಮದಿಗೆ ಪರ್ಯಾಯ ಮಾರ್ಗಗಳನ್ನು ಇರಿಸಿಕೊಂಡಿದೆ ಎಂದು ಅಧಿಕಾರಿಗಳು ಮತ್ತು ತಜ್ಞರು ತಿಳಿಸಿದ್ದಾರೆ.

ಹೊರ್ಮುಜ್‌ ಜಲಸಂಧಿಯನ್ನು ಇರಾನ್‌ನ ಮುಚ್ಚಿದೆ ಎಂದು ಅಲ್ಲಿನ ಸರ್ಕಾರಿ ಸ್ವಾಮ್ಯದ ಮಾಧ್ಯಮವು ವರದಿ ಮಾಡಿದೆ. ವಿಶ್ವದ ಕಚ್ಚಾ ತೈಲ ಹಾಗೂ ಅನಿಲ ರಫ್ತಿನಲ್ಲಿ ಶೇಕಡ 20ರಷ್ಟು ಈ ಜಲಸಂಧಿಯ ಮೂಲಕ ಆಗುತ್ತದೆ.

ADVERTISEMENT

ಜಲಸಂಧಿಯು ಅಲ್ಪ ಅವಧಿಗೆ ಮುಚ್ಚಿದರೆ ಅದರಿಂದ ಭಾರತದ ಮೇಲೆ ಹೆಚ್ಚಿನ ಪರಿಣಾಮವೇನೂ ಆಗದು. ಜಲಸಂಧಿಯ ಮೂಲಕ ಕಚ್ಚಾ ತೈಲ, ಇಂಧನ ಸಾಗಣೆಗೆ ದೀರ್ಘ ಅವಧಿಗೆ ಅವಕಾಶ ನೀಡದೆ ಇದ್ದರೆ ಭಾರತವು ಬೇರೆ ಕಡೆಗಳಿಂದ ಅವುಗಳನ್ನು ತರಿಸಿಕೊಳ್ಳಲು ಸಾಧ್ಯವಿದೆ. ರಷ್ಯಾದಿಂದ ಖರೀದಿ ಹೆಚ್ಚು ಮಾಡುವ ಅವಕಾಶವೂ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತದ ತೈಲ ಸಂಸ್ಕರಣಾಗಾರಗಳು ತಮ್ಮ ಬಳಿ ಹೊಂದಿರುವ ಹಾಗೂ ತರಿಸಿಕೊಳ್ಳುತ್ತಿರುವ ಕಚ್ಚಾ ತೈಲವು 10ರಿಂದ 15 ದಿನಗಳಿಗೆ ಆಗುವಷ್ಟು ಇದೆ. ಅಲ್ಲದೆ, ಈ ಸಂಸ್ಕರಣಾಗಾರಗಳಲ್ಲಿ ಇಂಧನ ಟ್ಯಾಂಕ್‌ಗಳಲ್ಲಿ ಕೂಡ ಭರ್ತಿ ಸಂಗ್ರಹ ಇದೆ. ಇದನ್ನು ಬಳಸಿ ಏಳರಿಂದ 10 ದಿನಗಳವರೆಗೆ ದೇಶದ ಇಂಧನ ಅಗತ್ಯವನ್ನು ಪೂರೈಸಿಕೊಳ್ಳಬಹುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ‘ಹೊರ್ಮುಜ್‌ ಜಲಸಂಧಿಯು ಹೆಚ್ಚು ಕಾಲ ಮುಚ್ಚಿರುವ ಸಾಧ್ಯತೆ ಇಲ್ಲ ಎಂಬುದು ಈ ಹಂತದಲ್ಲಿ ನಮಗೆ ಅನ್ನಿಸುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಲಸಂಧಿಯ ಮೂಲಕ ಸಾಗಲು ಹಡಗುಗಳಿಗೆ ಅವಕಾಶ ನೀಡುವುದಿಲ್ಲ ಎಂದು ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ (ಐಆರ್‌ಜಿಸಿ) ಎಚ್ಚರಿಕೆ ನೀಡಿದೆ. ಆದರೆ ಇದುವರೆಗೆ ಯಾವುದೇ ಹಡಗಿನ ಮೇಲೆ ದಾಳಿ ಆಗಿಲ್ಲ.

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಪೂರೈಕೆ ಚೆನ್ನಾಗಿಯೇ ಇದೆ, ಭಾರತವು ವೆನೆಜುವೆಲಾ, ಬ್ರೆಜಿಲ್‌ನಿಂದಲೂ ಕಚ್ಚಾ ತೈಲ ತರಿಸಿಕೊಳ್ಳುವ ಅವಕಾಶ ಹೊಂದಿದೆ ಎಂದು ಇನ್ನೊಬ್ಬರು ಅಧಿಕಾರಿ ಹೇಳಿದರು. ‘ಭಾರತವು ಅಮೆರಿಕದ ಒತ್ತಡಕ್ಕೆ ಪ್ರತಿಯಾಗಿ ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಕಡಿಮೆ ಮಾಡಿತ್ತು. ಆದರೆ ಪಶ್ಚಿಮ ಏಷ್ಯಾದಲ್ಲಿ ಅಡಚಣೆ ಉಂಟಾದರೆ ನಾವು ರಷ್ಯಾ ಕಡೆ ಮತ್ತೆ ಮುಖ ಮಾಡಬಹುದು’ ಎಂದು ಅವರು ವಿವರಿಸಿದರು.

‘ಇಲ್ಲಿರುವುದು ಸಾಗಣೆ ಅವಧಿಯ ಪ್ರಶ್ನೆ ಮಾತ್ರ. ಪಶ್ಚಿಮ ಏಷ್ಯಾದಿಂದ ಹಡಗುಗಳಿಗೆ ಭಾರತ ತಲುಪಲು ಐದು ದಿನಗಳು ಸಾಕು. ಆದರೆ ರಷ್ಯಾದಿಂದ ಹಡಗುಗಳು ಭಾರತಕ್ಕೆ ಬರಲು ಒಂದು ತಿಂಗಳು ಬೇಕಾಗುತ್ತದೆ. ಹೀಗಾಗಿ ಸರಿಯಾದ ಸಮಯಕ್ಕೆ ಕಚ್ಚಾ ತೈಲ ಕಳುಹಿಸಲು ಕೋರಿಕೆ ಸಲ್ಲಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.

ದೇಶದ ತೈಲ ಸಂಗ್ರಹಾಗಾರಗಳಲ್ಲಿ ಒಂದು ವಾರಕ್ಕೆ ಸಾಕಾಗುವಷ್ಟು ತೈಲ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.