ನವದೆಹಲಿ: ಪ್ರಸಕ್ತ ವರ್ಷದಲ್ಲಿ ಬೆಂಗಳೂರು ಸೇರಿದಂತೆ ದೇಶದ 7 ಪ್ರಮುಖ ನಗರಗಳಲ್ಲಿ ಮನೆಗಳ ಸರಾಸರಿ ಬೆಲೆ ವಾರ್ಷಿಕ ಶೇ 21ರಷ್ಟು ಏರಿಕೆಯಾಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್ ಗುರುವಾರ ತಿಳಿಸಿದೆ.
ಜಾಗದ ಬೆಲೆ ಹೆಚ್ಚಳ, ಕಾರ್ಮಿಕರು ಮತ್ತು ಕಟ್ಟಡ ನಿರ್ಮಾಣದ ಕೆಲವು ಕಚ್ಚಾ ವಸ್ತುಗಳ ಬೆಲೆಯಲ್ಲಿನ ಏರಿಕೆಯಿಂದ ಮನೆಗಳ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ.
ದೇಶದಲ್ಲಿ ನಡೆದ ಸಾರ್ವತ್ರಿಕ ಮತ್ತು ವಿಧಾನಸಭೆ ಚುನಾವಣೆಯಿಂದ ಹೊಸ ವಸತಿ ಯೋಜನೆಗಳ ಉದ್ಘಾಟನೆಗೆ ಅನುಮತಿ ನೀಡುವಲ್ಲಿ ವಿಳಂಬವಾಗಿದೆ. ಇದರಿಂದ ಈ ನಗರಗಳಲ್ಲಿ ಮನೆಗಳ ಮಾರಾಟದಲ್ಲಿ ಶೇ 4ರಷ್ಟು ಇಳಿಕೆಯಾಗುವ ಅಂದಾಜಿದೆ. ಇಲ್ಲಿಯವರೆಗೆ 4.59 ಲಕ್ಷ ಮನೆ ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 4.76 ಲಕ್ಷ ಮನೆಗಳು ಮಾರಾಟವಾಗಿದ್ದವು.
ಆದರೂ, ಒಟ್ಟಾರೆ ಮನೆಗಳ ಮಾರಾಟದ ಮೌಲ್ಯವು ಶೇ 16ರಷ್ಟು ಏರಿಕೆಯಾಗಿದ್ದು, ₹5.68 ಲಕ್ಷ ಕೋಟಿಯಾಗಿದೆ. 2023ರಲ್ಲಿ ₹4.88 ಲಕ್ಷ ಕೋಟಿಯಷ್ಟಾಗಿತ್ತು ಎಂದು ತಿಳಿಸಿದೆ.
ದೆಹಲಿಯಲ್ಲಿ ಮನೆಗಳ ಮಾರಾಟ ಶೇ 6ರಷ್ಟು ಕಡಿಮೆಯಾಗಿದ್ದು, 61,900 ಮನೆಗಳು ಮಾರಾಟವಾಗಿವೆ. ಪುಣೆ (ಶೇ 6), ಹೈದರಾಬಾದ್ (ಶೇ 5), ಚೆನ್ನೈ (ಶೇ 11), ಕೋಲ್ಕತ್ತದಲ್ಲಿ ಶೇ 20ರಷ್ಟು ಇಳಿಕೆಯಾಗಿದೆ. ಮುಂಬೈನಲ್ಲಿ 1.55 ಲಕ್ಷ ಮನೆಗಳು ಮಾರಾಟವಾಗಿದ್ದು ಶೇ 1ರಷ್ಟು ಏರಿಕೆಯಾಗಿದೆ. ಬೆಂಗಳೂರಲ್ಲಿ 65,230 ಮನೆಗಳು ಮಾರಾಟವಾಗಿದ್ದು, ಶೇ 2ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.