ADVERTISEMENT

ಜಿಡಿಪಿ ಹೆಚ್ಚಳಕ್ಕೆ ಎ.ಐ ಸಹಕಾರಿ: IMF ಮುಖ್ಯಸ್ಥೆ ಜಾರ್ಜಿವಾ

ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥೆ ಜಾರ್ಜಿವಾ ಅಭಿಪ್ರಾಯ

ಪಿಟಿಐ
Published 20 ಫೆಬ್ರುವರಿ 2026, 16:09 IST
Last Updated 20 ಫೆಬ್ರುವರಿ 2026, 16:09 IST
.
.   

ನವದೆಹಲಿ : ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನವು ಜಾಗತಿಕವಾಗಿ ಜಿಡಿಪಿ ಬೆಳವಣಿಗೆಯನ್ನು ಶೇಕಡ 0.8ರಷ್ಟು ಹೆಚ್ಚಿಸಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲೀನಾ ಜಾರ್ಜಿವಾ ಅಂದಾಜು ಮಾಡಿದ್ದಾರೆ.

‘ಅಲ್ಲದೆ, ಎ.ಐ ತಂತ್ರಜ್ಞಾನವು ವಿಕಸಿತ ಭಾರತ ಮತ್ತು ಅಭಿವೃದ್ಧಿ ಹೊಂದಿದ ದೇಶವಾಗುವ ಗುರಿ ಸಾಧನೆಗೆ ನೆರವಾಗಲಿದೆ’ ಎಂದಿದ್ದಾರೆ.

‘ಎ.ಐ ತಂತ್ರಜ್ಞಾನವು ಜಗತ್ತಿನ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲಿದೆ. ಅಂದರೆ ಕೋವಿಡ್‌ ಸಾಂಕ್ರಾಮಿಕಕ್ಕಿಂತ ಮೊದಲಿನ ಅವಧಿಯಲ್ಲಿ ಜಗತ್ತು ಎಷ್ಟು ವೇಗವಾಗಿ ಆರ್ಥಿಕ ಬೆಳವಣಿಗೆ ಕಾಣುತ್ತಿತ್ತೋ ಅದಕ್ಕಿಂತ ಹೆಚ್ಚಿನ ವೇಗದ ಬೆಳವಣಿಗೆ ಸಾಧ್ಯವಾಗಲಿದೆ. ಅದು ಹೊಸ ಅವಕಾಶಗಳನ್ನು, ಹೊಸ ಉದ್ಯೋಗಗಳನ್ನು ಸೃಷ್ಟಿಸುವುದಕ್ಕೆ ಬಹಳ ಉತ್ತಮ’ ಎಂದು ಇಲ್ಲಿ ನಡೆಯುತ್ತಿರುವ ‘ಎ.ಐ ಇಂಪ್ಯಾಕ್ಟ್‌ ಶೃಂಗಸಭೆ’ಯಲ್ಲಿ ಅವರು ಶುಕ್ರವಾರ ಹೇಳಿದ್ದಾರೆ.

ADVERTISEMENT

2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗುವ ಮತ್ತು 30 ಟ್ರಿಲಿಯನ್ ಡಾಲರ್ ಗಾತ್ರದ ಆರ್ಥಿಕತೆಯನ್ನು ಹೊಂದುವ ಮಹತ್ವಾಕಾಂಕ್ಷೆಯನ್ನು ಇರಿಸಿಕೊಂಡಿದೆ.

ಕಣ್ಮರೆ ಆಗಲಿರುವ ಉದ್ಯೋಗಗಳು ಆರಂಭಿಕ ಹಂತದವು ಎಂಬುದು ಕಳವಳ ಮೂಡಿಸುವಂಥದ್ದು. ಈ ಬಗೆಯ ಉದ್ಯೋಗಗಳನ್ನು ಬಯಸುವವರಿಗೆ ಅಪಾಯ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಎ.ಐ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನಿರ್ವಹಿಸಬೇಕು ಎಂದಾದರೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು, ಜನರು ಹೊಸದನ್ನು ಕಲಿಯುವುದನ್ನು ಕಲಿತುಕೊಳ್ಳಬೇಕು ಎಂದು ಹೇಳಿದ್ದಾರೆ.

ಎ.ಐ ಅಪಾಯಗಳ ಬಗ್ಗೆ ಎಚ್ಚರಿಕೆ

ಎ.ಐ ತಂತ್ರಜ್ಞಾನದ ಪರಿಣಾಮವಾಗಿ ಮೂರು ಪ್ರಮುಖ ಅಪಾಯಗಳು ಎದುರಾಗಬಹುದು ಎಂದು ಕ್ರಿಸ್ಟಲೀನಾ ಜಾರ್ಜಿವಾ ಎಚ್ಚರಿಸಿದರು.

ಮೊದಲನೆಯದಾಗಿ ‘ಜಗತ್ತಿನಲ್ಲಿ ಕೆಲವು ದೇಶಗಳು ಎ.ಐ ತಂತ್ರಜ್ಞಾನ ಹೊಂದಲಿವೆ ಇತರ ಹಲವು ದೇಶಗಳ ಬಳಿ ಈ ತಂತ್ರಜ್ಞಾನ ಇರುವುದಿಲ್ಲ. ಇದರಿಂದಾಗಿ ಜಗತ್ತು ಹೆಚ್ಚು ಅಸಮಾನವಾಗುವ ಅಪಾಯವಿದೆ’ ಎಂದಿದ್ದಾರೆ. ಎರಡನೆಯದಾಗಿ ಎ.ಐ ತಂತ್ರಜ್ಞಾನವು ಹಣಕಾಸು ಮಾರುಕಟ್ಟೆಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಬಹುದು ಎಂದು ಎಚ್ಚರಿಸಿದ್ದಾರೆ.

ಎ.ಐ ಕಾರಣದಿಂದಾಗಿ ಉದ್ಯೋಗಗಳಲ್ಲಿ ಬದಲಾವಣೆ ಆಗಬಹುದು. ಆದರೆ ಎ.ಐ ಆಧಾರಿತ ಅರ್ಥವ್ಯವಸ್ಥೆಯಲ್ಲಿ ಕೆಲಸ ಕಂಡುಕೊಳ್ಳುವುದು ಹೇಗೆ ಎಂಬ ಬಗ್ಗೆ ಜನರಿಗೆ ನೆರವು ನೀಡುವ ವಿಚಾರವಾಗಿ ಹೆಚ್ಚು ಆಲೋಚನೆ ನಡೆಯುತ್ತಿಲ್ಲ ಎಂದಿದ್ದಾರೆ.

‘ಎ.ಐ ಜಾಗತಿಕವಾಗಿ ಶೇ 40ರಷ್ಟು ಉದ್ಯೋಗಗಳ ಮೇಲೆ ಪರಿಣಾಮ ಬೀರುವ ಅಂದಾಜಿದೆ ಎಂದು ಕ್ರಿಸ್ಟಲಿನಾ ಜಾರ್ಜಿವಾ ಎಚ್ಚರಿಸಿದ್ದಾರೆ.

‘ನಮ್ಮ ಅಂದಾಜಿನ ಪ್ರಕಾರ ಉದ್ಯೋಗ ಮಾರುಕಟ್ಟೆಯ ಮೇಲೆ ಎ.ಐ ಪರಿಣಾಮ ತುಂಬಾ ಹೆಚ್ಚಿರಲಿದೆ ಸುನಾಮಿಯಂತಹ ಪರಿಣಾಮ ಬೀರಲಿದೆ. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಎ.ಐ ಶೇ 40ರಷ್ಟು ಉದ್ಯೋಗಗಳ ಮೇಲೆ ಪರಿಣಾಮ ಬೀರಿದರೆ ಮುಂದುವರಿದ ದೇಶಗಳಲ್ಲಿ ಶೇ 60ರಷ್ಟು ಉದ್ಯೋಗಗಳ ಮೇಲೆ ಪರಿಣಾಮ ಬೀರುವ ಅಂದಾಜಿದೆ’ ಎಂದು  ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.