ADVERTISEMENT

ಲ್ಯಾಬ್‌ನಲ್ಲಿ ಮೀನಿನ ಮಾಂಸ ಅಭಿವೃದ್ಧಿ: ದೇಶದಲ್ಲೇ ಮೊದಲು

ಪಿಟಿಐ
Published 29 ಜನವರಿ 2024, 15:50 IST
Last Updated 29 ಜನವರಿ 2024, 15:50 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೊಚ್ಚಿ: ಭಾರತದಲ್ಲಿ ಪ್ರಥಮ ಬಾರಿಗೆ ಮೀನಿನ ನಿರ್ದಿಷ್ಟ ಜೀವಕೋಶಗಳನ್ನು ಬಳಸಿಕೊಂಡು ಪ್ರಯೋಗಾಲಯದಲ್ಲಿ ಮೀನಿನ ಮಾಂಸದ  ಅಭಿವೃದ್ಧಿಗೆ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯು (ಐಸಿಎಆರ್‌–ಸಿಎಂಎಫ್‌ಆರ್‌ಐ) ಮುಂದಾಗಿದೆ.

ಪ್ರಾಥಮಿಕ ಹಂತದಲ್ಲಿ ಈ ಯೋಜನೆಯು ಮಾರುಕಟ್ಟೆಯಲ್ಲಿ ಅತಿಹೆಚ್ಚು ಬೆಲೆ ಹೊಂದಿರುವ ಸಮುದ್ರದ ಮೀನುಗಳಾದ ಕಿಂಗ್‌ ಫಿಶ್‌, ಪಾಂಫ್ರೆಟ್ ಹಾಗೂ ಸೀರ್‌ ಫಿಶ್‌ ಮಾಂಸದ ಉತ್ಪಾದನೆಗೆ ಸೀಮಿತವಾಗಿದೆ. 

ADVERTISEMENT

ಈಗಾಗಲೇ ಸಿಂಗಪುರ, ಇಸ್ರೇಲ್ ಮತ್ತು ಅಮೆರಿಕದ ಪ್ರಯೋಗಾಲಯಗಳಲ್ಲಿ ಸಂಸ್ಕರಿತ ಸಮುದ್ರ ಆಹಾರದ ಅಭಿವೃದ್ಧಿ ಮತ್ತು ಸಂಶೋಧನೆ ನಡೆಯುತ್ತಿದೆ. ಕೆಲವು ದೇಶಗಳ ಪ್ರಯೋಗಾಲಯದಲ್ಲಿ ಕೋಳಿ ಮಾಂಸ ಅಭಿವೃದ್ಧಿಪಡಿಸುವ ಕಾರ್ಯವೂ ಯಶಸ್ವಿಯಾಗಿದೆ.

ದೇಶದಲ್ಲಿ ಹೆಚ್ಚುತ್ತಿರುವ ಸಮುದ್ರದ ಆಹಾರ ಬೇಡಿಕೆ ಪೂರೈಸಲು ಈ ಕಾರ್ಯಕ್ಕೆ ನಿರ್ಧರಿಸಲಾಗಿದೆ. ಕೆಲವೇ ತಿಂಗಳುಗಳಲ್ಲಿ ಈ ಕೆಲಸ ಆರಂಭವಾಗಲಿದೆ. ಸಂಸ್ಕರಿತ ಮೀನಿನ ಮಾಂಸದ ಉತ್ಪಾದನಾ ಕ್ಷೇತ್ರದಲ್ಲಿ ಭಾರತವನ್ನು ಮುಂಚೂಣಿ ಸ್ಥಾನಕ್ಕೆ ಒಯ್ಯುವುದೇ ಈ ಯೋಜನೆಯ ಹಿಂದಿರುವ ಮೂಲ ಉದ್ದೇಶವಾಗಿದೆ ಎಂದು ಸಿಎಂಎಫ್‌ಆರ್‌ಐ ತಿಳಿಸಿದೆ. 

ಮಾಂಸ ಅಭಿವೃದ್ಧಿ ಹೇಗೆ?

ಮೀನಿನ ಜೀವಕೋಶ ಕೃಷಿ ಅಥವಾ ಪ್ರಯೋಗಾಲಯದಲ್ಲಿ ಮೀನಿನ ಮಾಂಸ ಅಭಿವೃದ್ಧಿಪಡಿಸುವ ಈ ಪ್ರಕ್ರಿಯೆಯಲ್ಲಿ ಮೀನಿನ ನಿರ್ದಿಷ್ಟ ಜೀವಕೋಶಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದನ್ನು ಪ್ರಯೋಗಾಲಯದಲ್ಲಿ ಇಟ್ಟು ಬೆಳೆಸಲಾಗುತ್ತದೆ. ಈ ಮಾಂಸವು ಮೀನಿನ ಮೂಲ ವಾಸನೆ, ರಚನೆ ಮತ್ತು ಗುಣಮಟ್ಟದ ಪೋಷಕಾಂಶವನ್ನು ಹೊಂದಿರುತ್ತದೆ ಎಂದು ತಿಳಿಸಿದೆ.

ನೀಟ್ ಮೀಟ್ ಜೊತೆ ಒಪ್ಪಂದ

ದೇಶದಲ್ಲಿ ನೀಟ್ ಮೀಟ್ ಬಯೋಟೆಕ್ ಎಂಬ ನವೋದ್ಯಮವು ಪ್ರಾಣಿಗಳ ಜೀವಕೋಶ ಬೇರ್ಪಡಿಸಿ ಸಂಸ್ಕರಿತ ಮಾಂಸ ಅಭಿವೃದ್ಧಿಪಡಿಸುವ ತಂತ್ರಜ್ಞಾನ ದಲ್ಲಿ ಪರಿಣತಿ ಹೊಂದಿದೆ. ಈ ನವೋದ್ಯಮದ ಜೊತೆಗೆ ಸಿಎಂಎಫ್‌ಆರ್‌ಐ ಒಪ್ಪಂದ ಮಾಡಿಕೊಂಡಿದೆ.

ಈ ಸಂಬಂಧ ಸಿಎಂಎಫ್‌ಆರ್‌ಐ ನಿರ್ದೇಶಕ ಎ. ಗೋಪಾಲಕೃಷ್ಣನ್‌ ಮತ್ತು ನೀಟ್ ಮೀಟ್‌ ಸಿಇಒ ಸಂದೀಪ್‌ ಶರ್ಮಾ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಸರ್ಕಾರಿ-ಖಾಸಗಿ ಸಹಭಾಗಿತ್ವದಡಿ ಮೀನಿನ ಮಾಂಸವನ್ನು
ಅಭಿವೃದ್ಧಿಪಡಿಸಲಾಗುತ್ತದೆ.

ಆನುವಂಶಿಕ, ಜೀವ ರಾಸಾಯನಿಕ ಸೇರಿದಂತೆ ವಿಶ್ಲೇಷಣಾತ್ಮಕ ಕೆಲಸವನ್ನು ಸಿಎಂಎಫ್‌ಆರ್‌ಐ ನಿರ್ವಹಿಸಲಿದೆ. ಇದಕ್ಕಾಗಿಯೇ ಪ್ರತ್ಯೇಕವಾಗಿ ಜೀವಕೋಶ ಅಭಿವೃದ್ಧಿ ಪ್ರಯೋಗಾಲಯವನ್ನು ಸ್ಥಾಪಿಸಲಿದೆ. ಇದಕ್ಕೆ ಪೂರಕ ಪರಿಕರಗಳು, ಸಿಬ್ಬಂದಿ ಸೇರಿದಂತೆ ಅಗತ್ಯವಿರುವ ಸೌಕರ್ಯ ಒದಗಿಸುವುದಾಗಿ
ಹೇಳಿದೆ. 

‘ದೇಶದ ಪ್ರಯೋಗಾಲಯಗಳಲ್ಲಿ ಪ್ರಾಣಿಗಳ ಜೀವಕೋಶ ಬಳಸಿಕೊಂಡು ಮಾಂಸ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಈ ಯೋಜನೆಯಿಂದ ವೇಗ ಸಿಗಲಿದೆ’ ಎಂದು ಗೋಪಾಲಕೃಷ್ಣನ್‌ ಹೇಳಿದ್ದಾರೆ.

ಲ್ಯಾಬ್‌ನಲ್ಲಿ ಮೀನಿನ ಮಾಂಸ ಅಭಿವೃದ್ಧಿಪಡಿಸುವ ಯೋಜನೆ ದೇಶಕ್ಕೆ ಆಹಾರದ ಭದ್ರತೆ ಒದಗಿಸಲಿದೆ. ಭಾರತವು ಈ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಹಕಾರಿಯಾಗಲಿದೆ.
– ಎ. ಗೋಪಾಲಕೃಷ್ಣನ್‌, ನಿರ್ದೇಶಕ, ಸಿಎಂಎಫ್‌ಆರ್‌ಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.