ADVERTISEMENT

ರಷ್ಯಾದ ತೈಲ ಕಂಪನಿಗಳಲ್ಲಿ ಹೂಡಿಕೆಗೆ ಕೇಂದ್ರ ಸೂಚನೆ

ರಾಯಿಟರ್ಸ್
Published 28 ಏಪ್ರಿಲ್ 2022, 16:10 IST
Last Updated 28 ಏಪ್ರಿಲ್ 2022, 16:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಯುರೋಪಿನ ಪ್ರಮುಖ ತೈಲ ಕಂಪನಿಯಾಗಿರುವ ಬಿಪಿ ರಷ್ಯಾದ ರೊಸ್ನೆಫ್ಟ್‌ ಕಂಪನಿಯಲ್ಲಿ ಹೊಂದಿರುವ ಷೇರುಪಾಲನ್ನು ಖರೀದಿಸುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರವು ತನ್ನ ಮಾಲೀಕತ್ವದ ಕಂಪನಿಗಳಿಗೆ ಸೂಚಿಸಿದೆ.

ರೊಸ್ನೆಫ್ಟ್‌ ಕಂಪನಿಯಲ್ಲಿ ತಾನು ಹೊಂದಿರುವ ಶೇಕಡ 19.75ರಷ್ಟು ಷೇರುಗಳನ್ನು ಮಾರಾಟ ಮಾಡುವುದಾಗಿ ಬಿಪಿ ಹೇಳಿದೆ. ಈ ಪಾಲನ್ನು ಖರೀದಿಸುವ ಬಗ್ಗೆ ಪರಿಶೀಲಿಸುವಂತೆ ಕೇಂದ್ರವು ಒಎನ್‌ಜಿಸಿ ವಿದೇಶ್ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೊ ರಿಸೋರ್ಸಸ್ ಲಿ., ಪ್ರೈಜ್ ಪೆಟ್ರೋಲಿಯಂ ಲಿ., ಆಯಿಲ್ ಇಂಡಿಯಾ ಮತ್ತು ಗೇಲ್‌ ಲಿ. ಕಂಪನಿಗಳಿಗೆ ಹೇಳಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಚಾರವಾಗಿ ಈ ಕಂಪನಿಗಳು ಹಾಗೂ ಕೇಂದ್ರ ಇಂಧನ ಸಚಿವಾಲಯ ಪ್ರತಿಕ್ರಿಯೆ ನೀಡಿಲ್ಲ. ಪ್ರತಿಕ್ರಿಯೆ ನೀಡಲು ಬಿಪಿ ನಿರಾಕರಿಸಿದೆ. ರಷ್ಯಾ ದೇಶವು ಉಕ್ರೇನ್ ಮೇಲೆ ಆಕ್ರಮಣ ನಡೆಸಿದೆ ಎಂಬ ಕಾರಣ ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ಆರ್ಥಿಕ ನಿರ್ಬಂಧ ವಿಧಿಸಿವೆ.

ADVERTISEMENT

ರಷ್ಯಾದ ಸಖಾಲಿನ್ 1 ಯೋಜನೆಯಲ್ಲಿ ಎಕ್ಸಾನ್ ಮೊಬೈಲ್ ಕಾರ್ಪ್‌ ಹೊಂದಿರುವ ಶೇ 30ರಷ್ಟು ಪಾಲನ್ನು ಖರೀದಿಸುವ ಬಗ್ಗೆ ಪರಿಶೀಲಿಸುವಂತೆ ಕೇಂದ್ರವು ಒಎನ್‌ಜಿಸಿ ಕಂಪನಿಯ ವಿದೇಶ ಹೂಡಿಕೆ ವಿಭಾಗಕ್ಕೆ ಹೇಳಿದೆ. ಈ ಯೋಜನೆಯಲ್ಲಿನ ಹೂಡಿಕೆ ಹಿಂಪಡೆಯುವುದಾಗಿ ಎಕ್ಸಾನ್ ಕಂಪನಿ ಮಾರ್ಚ್‌ನಲ್ಲಿ ಹೇಳಿದೆ.

ರಷ್ಯಾದ ತೈಲ ಕಂಪನಿಗಳಲ್ಲಿ ವಿನಾಯಿತಿ ಬೆಲೆಗೆ ಪಾಲುದಾರಿಕೆ ಸಿಗಬಹುದು ಎಂಬ ವಿಶ್ವಾಸ ಭಾರತದ ಕಂಪನಿಗಳಲ್ಲಿ ಇದೆ ಎಂದು ಮೂಲಗಳು ಹೇಳಿವೆ. ಹೂಡಿಕೆ ಮಾಡಿದರೆ ಆರ್ಥಿಕ ನಿರ್ಬಂಧದಿಂದ ಅವುಗಳ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಭಾರತದ ಕಂಪನಿಗಳು ಪರಿಶೀಲನೆ ನಡೆಸಬೇಕಿದೆ ಎಂದು ಮೂಲಗಳು ವಿವರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.