ADVERTISEMENT

FTA: ಭಾರತದಲ್ಲಿ ಇನ್ನು ಸಾಮಾನ್ಯರಿಗೂ ಕೈಗೆಟುಕಲಿದೆ ಬೆಂಜ್, BMW, ಔಡಿ ಕಾರುಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2026, 11:31 IST
Last Updated 27 ಜನವರಿ 2026, 11:31 IST
   

ನವದೆಹಲಿ: 18 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಭಾರತ ಮತ್ತು ಐರೋಪ್ಯ ಒಕ್ಕೂಟದ (ಇಯು) ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಕನಸು ನನಸಾಗಿದೆ. ಇದು ವೈನ್ ಮತ್ತು ಐಷಾರಾಮಿ ಕಾರು ಪ್ರೇಮಿಗಳ ಉತ್ಸಾಹ ಇಮ್ಮಡಿಗೊಳಿಸಿದೆ.

ಭಾರತ ಪ್ರಧಾನಿ ನರೇಂದ್ರ ಮೋದಿ ಈ ಒಪ್ಪಂದವನ್ನು 'ಮದರ್ ಆಫ್ ಆಲ್ ಡೀಲ್ಸ್' (ಎಲ್ಲ ಒಪ್ಪಂದಗಳ ತಾಯಿ) ಎಂದು ಬಣ್ಣಿಸಿದ್ದಾರೆ.

ಅಗ್ಗವಾಗಲಿದೆ ಐಷಾರಾಮಿ ಕಾರುಗಳು...

ADVERTISEMENT

ಯುರೋಪ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಗಳಾದ ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯು ಹಾಗೂ ಔಡಿ ಕಾರುಗಳು ಭಾರತದಲ್ಲಿ ಅಗ್ಗವಾಗಲಿದೆ. ಸದ್ಯ ಯುರೋಪಿನಿಂದ ಆಮದಾಗುವ ಕಾರುಗಳಿಗೆ ಶೇ 70ಕ್ಕಿಂತ ಹೆಚ್ಚು ಆಮದು ಸುಂಕ ಹೇರಲಾಗುತ್ತಿದೆ. ಐಷಾರಾಮಿ ಕಾರುಗಳ ಮೇಲಿನ ಸುಂಕವನ್ನು ಕ್ರಮೇಣ ಶೇ 10ಕ್ಕೆ ಇಳಿಸಲಾಗುತ್ತದೆ. ಇದು ಭಾರತೀಯ ಐಷಾರಾಮಿ ಕಾರು ಮಾರುಕಟ್ಟೆಗೆ ಉತ್ತೇಜನವನ್ನು ನೀಡಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ₹25 ಲಕ್ಷ ಬೆಲೆ ಪರಿಧಿಯ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ ಇದರಲ್ಲಿ ಐರೋಪ್ಯ ಒಕ್ಕೂಟ ಹೆಚ್ಚಿನ ಆಸಕ್ತಿ ಹೊಂದಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೆ ಭಾರತದಲ್ಲೇ ಕಾರುಗಳನ್ನು ನಿರ್ಮಿಸಿ ರಫ್ತು ಮಾಡುವ ಇರಾದೆಯನ್ನು ಹೊಂದಲಾಗಿದೆ.

ಅಗ್ಗವಾಗಲಿದೆ ವೈನ್...

ಮುಕ್ತ ವ್ಯಾಪಾರ ಒಪ್ಪಂದದಿಂದ ಫ್ರಾನ್ಸ್, ಇಟಲಿ, ಸ್ಪೇನ್ ಸೇರಿದಂತೆ ಯುರೋಪಿನ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳಲಾಗುವ ವೈನ್ ಈಗ ಹೆಚ್ಚು ಅಗ್ಗವಾಗಲಿದೆ. ಸದ್ಯ ಭಾರತಕ್ಕೆ ಆಮದು ಮಾಡಿಕೊಳ್ಳುವ ವೈನ್ ಮೇಲೆ ಶೇ 150ರಷ್ಟು ಸುಂಕ ವಿಧಿಸಲಾಗುತ್ತದೆ. ಇದರನ್ನು ಶೇ 20ಕ್ಕೆ ಇಳಿಸುವ ಪ್ರಸ್ತಾಪ ಇದೆ. ಇದರಿಂದ ಬೆಲೆ ಗಣನೀಯವಾಗಿ ಕುಸಿತವಾಗಲಿದೆ.

ಇದನ್ನು ಕ್ರಮೇಣ ಜಾರಿಗೆ ತರಲಾಗುವುದು. ಪ್ರೀಮಿಯಂ ಜಿನ್, ವೋಡ್ಕಾ ಸಹ ದೇಶದಲ್ಲಿ ಅಗ್ಗವಾಗಲಿದೆ. ಯುರೋಪಿನಲ್ಲಿ ಭಾರತದ ವೈನ್‌ಗಳಿಗೂ ಸುಂಕ ಇಳಿಕೆಯಾಗಲಿದೆ.

ಔಷಧಿಯು ಅಗ್ಗ...

ಆರೋಗ್ಯ ಕ್ಷೇತ್ರದಲ್ಲೂ ಗಮನಾರ್ಹ ಬದಲಾವಣೆ ಕಂಡುಬರಲಿದೆ. ಅತ್ಯಾಧುನಿಕ ಆರೋಗ್ಯ ಉಪಕರಣಗಳಿಗೆ ಯುರೋಪ್ ಹೆಸರುವಾಸಿಯಾಗಿದೆ. ಈ ಒಪ್ಪಂದದ ಮೂಲಕ ಕ್ಯಾನ್ಸರ್ ಮತ್ತು ಗಂಭೀರ ಕಾಯಿಲೆಗಳಿಗೆ ಆಮದು ಮಾಡಿಕೊಳ್ಳುವ ಔಷಧಿಗಳು ಭಾರತದಲ್ಲಿ ಅಗ್ಗವಾಗಲಿದೆ. ಯುರೋಪ್‌ನಿಂದ ಆಮದಾಗುವ ವೈದ್ಯಕೀಯ ಉಪಕರಣಗಳ ಬೆಲೆಯು ಕುಸಿಯಲಿದೆ.

ಭಾರತದಿಂದ ತಯಾರಿಸಿದ ಔಷಧಿಗಳಿಗೆ ಯುರೋಪ್‌ನ 27 ಮಾರುಕಟ್ಟೆಗಳಲ್ಲೂ ಮಾರಾಟಕ್ಕೆ ಅವಕಾಶ ತೆರೆದುಕೊಳ್ಳುತ್ತದೆ.

ಇದರ ಹೊರದಾಗಿ ಎಲೆಕ್ಟ್ರಾನಿಕ್, ವಿಮಾನದ ಬಿಡಿಭಾಗಗಳು, ಮೊಬೈಲ್ ಫೋನ್, ಸ್ಟೀಲ್, ರಾಸಾಯನಿಕ ಉತ್ಪನ್ನಗಳು ಸಹ ಅಗ್ಗವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.