ADVERTISEMENT

ತೆರಿಗೆ ಸಂಗ್ರಹ ಇಳಿಕೆ: 20 ವರ್ಷಗಳಲ್ಲಿ ಮೊದಲ ಬಾರಿಗೆ ಕೇಂದ್ರದ ವರಮಾನ ಇಳಿಕೆ

ರಾಯಿಟರ್ಸ್
Published 25 ಜನವರಿ 2020, 5:27 IST
Last Updated 25 ಜನವರಿ 2020, 5:27 IST
ತೆರಿಗೆ– ಸಾಂದರ್ಭಿಕ ಚಿತ್ರ
ತೆರಿಗೆ– ಸಾಂದರ್ಭಿಕ ಚಿತ್ರ   
""

ಮುಂಬೈ: ಪ್ರಸಕ್ತ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್‌ ಮತ್ತು ನೇರ ತೆರಿಗೆ ಸಂಗ್ರಹವು ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಕುಸಿಯಲಿದ್ದು, ಕೇಂದ್ರ ಸರ್ಕಾರದ ಸಾಲದ ಹೊರೆ ಹೆಚ್ಚಿಸಲಿದೆ.

ನೇರ ತೆರಿಗೆ ಸಂಗ್ರಹವು ಸರ್ಕಾರದ ವಾರ್ಷಿಕ ವರಮಾನದ ಅಂದಾಜಿನಲ್ಲಿ ಶೇ 80ರಷ್ಟು ಪಾಲು ಹೊಂದಿದೆ. ತೆರಿಗೆ ಸಂಗ್ರಹದಲ್ಲಿನ ಶೇ 10ರಷ್ಟು ಕೊರತೆಯ ಕಾರಣಕ್ಕೆ ಸರ್ಕಾರವು ತನ್ನ ವೆಚ್ಚ ಸರಿದೂಗಿಸಲು ಭಾರಿ ಕಸರತ್ತು ಮಾಡಬೇಕಾಗಿದೆ. ತನ್ನ ಒಟ್ಟಾರೆ ವೆಚ್ಚದಲ್ಲಿ ₹ 2 ಲಕ್ಷ ಕೋಟಿ ಕಡಿತ ಮಾಡಲು ಸರ್ಕಾರ ಈಗಾಗಲೇ ನಿರ್ಧರಿಸಿದೆ.

ವಿತ್ತೀಯ ಕೊರತೆಯನ್ನು ಜಿಡಿಪಿಯ ‘ಸ್ವೀಕಾರಾರ್ಹ ಮಿತಿ’(ಶೇ 3.3) ಒಳಗೆ ಕಾಯ್ದುಕೊಳ್ಳಲು ಅನ್ಯ ಮೂಲಗಳಿಂದ ಸಾಲ ಸಂಗ್ರಹಿಸುವುದು ಅನಿವಾರ್ಯವಾಗಲಿದೆ. ಇದರಿಂದ ಏಷ್ಯಾದ ಮೂರನೇ ಅತಿದೊಡ್ಡಆರ್ಥಿಕತೆಯ ಸಂಕಷ್ಟ ಇನ್ನಷ್ಟು ಹೆಚ್ಚಲಿದೆ. ಆರ್ಥಿಕ ಪ್ರಗತಿಗೆ ಹೊಸ ಅಡಚಣೆಗಳೂ ಎದುರಾಗಲಿವೆ.

ADVERTISEMENT

ಆರ್ಥಿಕ ಪ್ರಗತಿ ದರದಲ್ಲಿ ಭಾರಿ ಇಳಿಕೆ ಮತ್ತು ಕಾರ್ಪೊರೇಟ್‌ ತೆರಿಗೆ ಕಡಿತಗೊಳಿಸಿದ ನಿರ್ಧಾರದಿಂದಾಗಿ ತೆರಿಗೆ ಸಂಗ್ರಹವು 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಡಿಮೆಯಾಗಲಿದೆ. ತೆರಿಗೆ ಸಂಗ್ರಹವು 2000–01 ರಿಂದ ಏರುಗತಿಯಲ್ಲೇ ಇತ್ತು. ಈ ವರ್ಷ ಅದಕ್ಕೆ ಕಡಿವಾಣ ಬೀಳಲಿದೆ ಎಂದು ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ (2019–20) ನೇರ ತೆರಿಗೆ ಸಂಗ್ರಹದ ಗುರಿಯನ್ನು ಕೇಂದ್ರ ಸರ್ಕಾರವು ಶೇ 17ರಷ್ಟು ಹೆಚ್ಚಿಸಿ₹ 13.5 ಲಕ್ಷ ಕೋಟಿಗೆ ನಿಗದಿಪಡಿಸಿದೆ. ಇದುವರೆಗೆ ಸಂಗ್ರಹವಾದ ತೆರಿಗೆ ಮೊತ್ತ ಕೇವಲ ₹ 7.3 ಲಕ್ಷ ಕೋಟಿ ಇದೆ. ಇದು ಹಿಂದಿನ ವರ್ಷ ಇದೇ ಅವಧಿಯಲ್ಲಿ ಸಂಗ್ರಹವಾಗಿದ್ದ ಮೊತ್ತಕ್ಕೆ ಹೋಲಿಸಿದರೆ ಶೇ 5.5ರಷ್ಟು ಕಡಿಮೆ ಇದೆ.

ತಯಾರಿಕಾ ವಲಯಕ್ಕೆ ಮತ್ತು ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲು ಹಿಂದಿನ ವರ್ಷ ಕಾರ್ಪೊರೇಟ್‌ ತೆರಿಗೆಯನ್ನು ಶೇ 30ರಿಂದ ಶೇ 22ಕ್ಕೆ ಇಳಿಸಲಾಗಿತ್ತು. ಇದು ಕೂಡ ವರಮಾನ ಸಂಗ್ರಹದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಆರ್ಥಿಕತೆಯಲ್ಲಿನ ಸದ್ಯದ
ನಿರಾಶಾದಾಯಕ ಪರಿಸ್ಥಿತಿ ಗಮನಿಸಿದರೆತೆರಿಗೆ ಸಂಗ್ರಹ ಆಶಾದಾಯಕವಾಗಿಲ್ಲ ಎಂದು ಅಧಿಕಾರಿಯೊಬ್ಬರುಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.