
ವಿಶ್ವಸಂಸ್ಥೆ : ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 6.6ರಷ್ಟು ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಇದೇ ಅವಧಿಯಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯು ಶೇ 2.7ರಷ್ಟಾಗಬಹುದು ಎಂದು ಹೇಳಿದೆ.
ಸಾರ್ವಜನಿಕ ಹೂಡಿಕೆ ಹೆಚ್ಚಳ, ತೆರಿಗೆ ಸುಧಾರಣೆಗಳು, ಬಡ್ಡಿ ದರ ಇಳಿಕೆಯು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಆದರೆ, ಅಮೆರಿಕದ ಹೆಚ್ಚಿನ ಸುಂಕವು ರಫ್ತು ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಶುಕ್ರವಾರ ತಿಳಿಸಿದೆ.
2025ರಲ್ಲಿ ಭಾರತದ ಪ್ರಗತಿ ಶೇ 7.4ರಷ್ಟಿರಲಿದೆ. ಇದು 2026ರಲ್ಲಿ ಶೇ 6.6ಕ್ಕೆ ಮಂದಗೊಳ್ಳಲಿದೆ. ಆದರೂ ಭಾರತವು ವಿಶ್ವದ ಅತ್ಯಂತ ವೇಗದ ಪ್ರಮುಖ ಆರ್ಥಿಕತೆಯಾಗಿ ಉಳಿಯಲಿದೆ ಎಂದು ಹೇಳಿದೆ.
ಕೆಲವು ಸರಕುಗಳ ಮೇಲೆ ಸುಂಕದ ಪರಿಣಾಮ ಬೀರಬಹುದಾದರೂ, ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್‌ಫೋನ್‌ಗಳಂತಹ ಪ್ರಮುಖ ರಫ್ತುಗಳು ವಿನಾಯಿತಿ ಪಡೆಯುವ ನಿರೀಕ್ಷೆಯಿದೆ ಎಂದು ಹೇಳಿದೆ.
ಯುರೋಪ್ ಮತ್ತು ಪಶ್ಚಿಮ ಏಷ್ಯಾ ದೇಶಗಳು ಸೇರಿದಂತೆ ಪ್ರಮುಖ ಮಾರುಕಟ್ಟೆಗಳಿಂದ ಭಾರತದ ಸರಕುಗಳಿಗೆ ಸದೃಢ ಬೇಡಿಕೆಯ ನಿರೀಕ್ಷೆ ಇದೆ. ಇದು ಸುಂಕ ಪರಿಣಾಮವನ್ನು ಕಡಿಮೆ ಮಾಡಲಿದೆ. ತಯಾರಿಕೆ ಮತ್ತು ಸೇವಾ ವಲಯದ ಚಟುವಟಿಕೆಯು ಸದೃಢವಾಗಿರಲಿದೆ ಎಂದು ತಿಳಿಸಿದೆ.
2025ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯು ಶೇ 2.8ರಷ್ಟಿರುವ ಅಂದಾಜಿದೆ. 2026ರಲ್ಲಿ ಶೇ 2.7 ಮತ್ತು 2027ರಲ್ಲಿ ಶೇ 2.9ರಷ್ಟಾಗಬಹುದು. ಇದು 2010ರಿಂದ 2019ರವರೆಗೆ ಇದ್ದ ಸರಾಸರಿ ಶೇ 3.2ಕ್ಕಿಂತ ಕಡಿಮೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.