
ನವದೆಹಲಿ: ದೇಶದಲ್ಲಿ ಪೆಟ್ರೋಲ್ ಬಂಕ್‌ಗಳ ಸಂಖ್ಯೆ 1 ಲಕ್ಷ ದಾಟಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಘಟಕದ (ಪಿಪಿಎಸಿ) ಅಂಕಿ–ಅಂಶಗಳು ಹೇಳುತ್ತಿವೆ.
2015ರಲ್ಲಿ ದೇಶದಲ್ಲಿ 50,451 ಪೆಟ್ರೋಲ್ ಬಂಕ್‌ಗಳು ಇದ್ದವು. ಅದು ಈ ನವೆಂಬರ್ ವೇಳೆಗೆ 1,00,266ಕ್ಕೆ ಹೆಚ್ಚಳವಾಗಿದೆ. ಅಮೆರಿಕ ಮತ್ತು ಚೀನಾ ಬಳಿಕ ಭಾರತದಲ್ಲಿ ಅತಿ ಹೆಚ್ಚು ಪೆಟ್ರೋಲ್ ಬಂಕ್‌ಗಳು ಇವೆ.
ಪೆಟ್ರೋಲ್ ಬಂಕ್‌ಗಳ ಪೈಕಿ ಶೇ 90ರಷ್ಟನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ನಿರ್ವಹಿಸುತ್ತಿವೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) 41,664 ಬಂಕ್‌ಗಳನ್ನು ಹೊಂದಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) 24,605 ಮತ್ತು ಎಚ್‌ಪಿಸಿಎಲ್ 24,418 ಬಂಕ್‌ಗಳನ್ನು ಹೊಂದಿದೆ.
2003–04ರಲ್ಲಿ ಖಾಸಗಿ ವಲಯವು 27 ಬಂಕ್‌ಗಳೊಂದಿಗೆ ಪೆಟ್ರೋಲ್ ಬಂಕ್ ವ್ಯವಹಾರವನ್ನು ಆರಂಭಿಸಿತ್ತು. 2015ರಲ್ಲಿ ಖಾಸಗಿ ವಲಯದ ಪೆಟ್ರೋಲ್ ಬಂಕ್‌ಗಳ ಪ್ರಮಾಣ ಶೇ 5.9ರಷ್ಟಿತ್ತು. ಅದು ಪ್ರಸ್ತುತ ಶೇ 9.3ಕ್ಕೇರಿದೆ. ಖಾಸಗಿ ವಲಯದ ನಯಾರಾ ಎನರ್ಜಿ ಲಿಮಿಟೆಡ್ 6,921, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 2,114 ಮತ್ತು ಬಿ.ಪಿ ಶೆಲ್ 346 ಬಂಕ್‌ಗಳನ್ನು ಹೊಂದಿದೆ.
2024ರ ವರದಿ ಪ್ರಕಾರ, ಅಮೆರಿಕದಲ್ಲಿ 1,96,643 ಮತ್ತು ಚೀನಾದಲ್ಲಿ 1,15,228 ಪೆಟ್ರೋಲ್ ಬಂಕ್‌ಗಳಿವೆ.
ಗ್ರಾಮೀಣ ಪ್ರದೇಶಗಳಲ್ಲಿನ ಪೆಟ್ರೋಲ್ ಬಂಕ್‌ಗಳ ಪ್ರಮಾಣ 2015ರಲ್ಲಿ ಶೇ 22ರಷ್ಟಿತ್ತು. ಅದು ಈಗ ಶೇ 29ಕ್ಕೇರಿದೆ. ಪೆಟ್ರೋಲ್ ಬಂಕ್‌ಗಳು ಪೆಟ್ರೋಲ್ ಮತ್ತು ಡೀಸೆಲ್ ವ್ಯವಹಾರದ ಜೊತೆಗೆ ಇದೀಗ ಸಿಎನ್‌ಜಿಯಂತಹ ಪರ್ಯಾಯ ಇಂಧನವನ್ನು ಕೂಡ ಮಾರಾಟ ಮಾಡುತ್ತಿವೆ. ಅಲ್ಲದೆ ಇ.ವಿ ಚಾರ್ಜಿಂಗ್ ಕೇಂದ್ರಗಳನ್ನೂ ಹೊಂದಿವೆ.
ಇಂಧನ ಬೆಲೆಯ ಮೇಲೆ ಸರ್ಕಾರದ ಪರೋಕ್ಷ ನಿಯಂತ್ರಣದಿಂದ ಇಂಧನ ವಹಿವಾಟಿನಲ್ಲಿ ಖಾಸಗಿ ಪಾಲುದಾರಿಕೆ ಕಡಿಮೆ ಇದೆ ಎಂದು ಕೈಗಾರಿಕಾ ವಲಯದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.