ADVERTISEMENT

2025ರಲ್ಲಿ ದೇಶದ ಹಣಕಾಸು ಲೋಕದ ಹಿನ್ನೋಟ: ಸಿಹಿ ಅಧ್ಯಾಯದಲ್ಲಿ ಕೆಲ ಕಹಿ ಪುಟಗಳು

ವಿಜಯ್ ಜೋಷಿ
Published 25 ಡಿಸೆಂಬರ್ 2025, 22:30 IST
Last Updated 25 ಡಿಸೆಂಬರ್ 2025, 22:30 IST
ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತು –ಪಿಟಿಐ ಚಿತ್ರ
ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತು –ಪಿಟಿಐ ಚಿತ್ರ   
ವರ್ಷದ ಕೊನೆಯಲ್ಲಿ ನಿಂತು, ಇಡೀ ವರ್ಷದಲ್ಲಿ ದೇಶದ ಹಣಕಾಸಿನ ಲೋಕದಲ್ಲಿ ಆಗಿಹೋದ ಪ್ರಮುಖ ವಿದ್ಯಮಾನಗಳ ಅವಲೋಕನ ನಡೆಸಲು ಯತ್ನಿಸಿದರೆ ಬೇವು–ಬೆಲ್ಲಗಳೆರಡರ ಅನುಭವ ದಕ್ಕುತ್ತದೆ. ವರ್ಷದ ಆರಂಭದಲ್ಲಿ ಬೇವು–ಬೆಲ್ಲ ನೀಡುವುದರ ಹಿಂದಿನ ಆಶಯವು ಆಧ್ಯಾತ್ಮಿಕ ಮಹತ್ವವನ್ನಷ್ಟೇ ಅಲ್ಲದೆ, ಆರ್ಥಿಕ ಜಗತ್ತಿನಲ್ಲಿಯೂ ಎಷ್ಟೊಂದು ಅರ್ಥವನ್ನು ಹೊಂದಿದೆಯಲ್ಲ ಎಂಬ ಸೋಜಿಗ ಉಂಟಾಗುತ್ತದೆ

ಆದಾಯ ತೆರಿಗೆ ವಿನಾಯಿತಿ

ವರ್ಷದ ಎರಡನೆಯ ತಿಂಗಳ ಮೊದಲ ದಿನ ಮಂಡನೆಯಾದ ಕೇಂದ್ರ ಬಜೆಟ್‌ ಮಹತ್ವದ ಬದಲಾವಣೆಯೊಂದನ್ನು ಹೊತ್ತು ತಂದಿತು. ₹12 ಲಕ್ಷದವರೆಗಿನ ವೈಯಕ್ತಿಕ ಆದಾಯಕ್ಕೆ ತೆರಿಗೆ ಇಲ್ಲ, ವೇತನದಾರರಿಗೆ ₹12.75 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.

ಕೋವಿಡ್‌–19 ಸಾಂಕ್ರಾಮಿಕವು ಅಪ್ಪಳಿಸಿದ ದಿನದಿಂದಲೂ ಆದಾಯ ತೆರಿಗೆ ವಿನಾಯಿತಿ ಮಿತಿಯಲ್ಲಿ ಹೆಚ್ಚಳ ಆಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದ ದೇಶದ ಮಧ್ಯಮ ವರ್ಗಕ್ಕೆ ಇದು ಸಿಹಿ ನೀಡಿತು. ‘ವಿವಿಧ ರಾಜ್ಯ ಸರ್ಕಾರಗಳು ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆಯು ಹೆಚ್ಚಳ ಕಾಣುತ್ತಿದೆ. ಕೇಂದ್ರದ ಕ್ರಮವು ನಗರ ಪ್ರದೇಶಗಳಲ್ಲಿ ಬೇಡಿಕೆಯನ್ನು ಜಾಸ್ತಿ ಮಾಡಲಿದೆ’ ಎಂದು ಆಗ ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದರು.

ಜಿಎಸ್‌ಟಿ ದರ ಪರಿಷ್ಕರಣೆ

ಜಿಡಿಪಿ ಬೆಳವಣಿಗೆ ಪ್ರಮಾಣಕ್ಕೆ ಸಂಬಂಧಿಸಿದ ಅಂಕಿ–ಅಂಶಗಳು ಈ ಅಂದಾಜು ಸರಿ ಎಂದು ಹೇಳುತ್ತಿರಬಹುದು. ಏಪ್ರಿಲ್‌ 1ರಿಂದ ಶುರುವಾದ ಹೊಸ ಆರ್ಥಿಕ ವರ್ಷದ ಎರಡು ತ್ರೈಮಾಸಿಕಗಳಲ್ಲಿ ಜಿಡಿಪಿ ಬೆಳವಣಿಗೆ ದರವು ಹೆಚ್ಚುತ್ತ ಸಾಗಿದೆ. ಆದರೆ ಆದಾಯ ತೆರಿಗೆ ವಿನಾಯಿತಿಯ ಮಟ್ಟವನ್ನು ಹೆಚ್ಚಿಸಿದ್ದಕ್ಕಿಂತ ಹೆಚ್ಚು ಸಿಹಿಯಾದ, ಹೆಚ್ಚು ವ್ಯಾಪಕ ಪರಿಣಾಮ ಉಂಟುಮಾಡುವ ತೀರ್ಮಾನವೊಂದು ನಂತರದಲ್ಲಿ ಜಾರಿಗೆ ಬಂತು.

ADVERTISEMENT

ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದ ಜನರಿಗೆ ಸಿಹಿ ಸುದ್ದಿಯೊಂದು ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವದ ದಿನ ಪ್ರಕಟಿಸಿದರು. ಆ ಸಿಹಿ ಸುದ್ದಿಯು ಜಿಎಸ್‌ಟಿ ದರ ಪರಿಷ್ಕರಣೆಗೆ ಸಂಬಂಧಿಸಿದ್ದಾಗಿರಲಿದೆ ಎಂದು ಅಧಿಕೃತ ಮೂಲಗಳು ಆಗಲೇ ಮಾಹಿತಿ ನೀಡಿದ್ದವು.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳನ್ನು ಒಳಗೊಂಡಿರುವ ಜಿಎಸ್‌ಟಿ ಮಂಡಳಿಯು ಪರೋಕ್ಷ ತೆರಿಗೆ ಹಂತಗಳಲ್ಲಿ ದೊಡ್ಡ ಬದಲಾವಣೆ ತರುವ ತೀರ್ಮಾನ ತೆಗೆದುಕೊಂಡಿತು. ಆ ತೀರ್ಮಾನಗಳು ಸೆಪ್ಟೆಂಬರ್‌ 22ರಿಂದ ಜಾರಿಗೆ ಬಂದವು. ಜಿಎಸ್‌ಟಿ ವ್ಯವಸ್ಥೆಯನ್ನು ರೂಪಿಸಿದ್ದು ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿನ ಅತಿದೊಡ್ಡ ಸುಧಾರಣೆಯಾದರೆ, ಸೆಪ್ಟೆಂಬರ್‌ 22ರಂದು ಜಾರಿಗೆ ಬಂದ ದರ ಪರಿಷ್ಕರಣೆಯು ಜಿಎಸ್‌ಟಿ ವ್ಯವಸ್ಥೆಯಲ್ಲಿನ ಅತಿದೊಡ್ಡ ಸುಧಾರಣೆ.

ದಿನಸಿ ಉತ್ಪನ್ನಗಳು, ಕೃಷಿ ಉಪಕರಣಗಳು, ಬಟ್ಟೆ, ಔಷಧಗಳು ಮತ್ತು ವಾಹನಗಳು ಸೇರಿದಂತೆ ಒಟ್ಟು 375 ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಪರಿಷ್ಕರಣೆ ಕಂಡಿತು. ಜಿಎಸ್‌ಟಿ ಸುಧಾರಣೆಯನ್ನು ಪ್ರಧಾನಿ ಮೋದಿ ಅವರು ‘ಜಿಎಸ್‌ಟಿ ಉಳಿತಾಯ ಉತ್ಸವ’ ಎಂದು ಬಣ್ಣಿಸಿದರು. ಜಿಎಸ್‌ಟಿ ದರ ಇಳಿಕೆಯಿಂದ ಅರ್ಥ ವ್ಯವಸ್ಥೆಗೆ ಆದ ಅನುಕೂಲವನ್ನು ಎಸ್‌ಬಿಐ ರಿಸರ್ಚ್‌ ಸಂಸ್ಥೆಯು ಬಹಳ ಚೆನ್ನಾಗಿ ಹೇಳಿದೆ. ‘ಜಿಎಸ್‌ಟಿ ಸುಧಾರಣೆಗಳಿಂದಾಗಿ ಸರ್ಕಾರಗಳಿಗೆ ವಾರ್ಷಿಕ ₹85 ಸಾವಿರ ಕೋಟಿ ವರಮಾನ ನಷ್ಟ ಆಗಲಿದೆ. ಆದರೆ ಈ ಸುಧಾರಣೆಗಳ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ₹1.98 ಲಕ್ಷ ಕೋಟಿ ಮೌಲ್ಯದ ಬೇಡಿಕೆಯು ಹೊಸದಾಗಿ ಸೃಷ್ಟಿ ಆಗಲಿದೆ’ ಎಂದು ಅದು ಅಂದಾಜು ಮಾಡಿದೆ.

ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಆದಾಯ ತೆರಿಗೆ ಮಿತಿ ಸಡಿಲಿಕೆ ಕ್ರಮ ಹಾಗೂ ಜಿಎಸ್‌ಟಿ ಸುಧಾರಣೆಯ ಒಟ್ಟು ಪರಿಣಾಮವಾಗಿ, ಅರ್ಥ ವ್ಯವಸ್ಥೆಯಲ್ಲಿ ₹5.31 ಲಕ್ಷ ಕೋಟಿ ಮೌಲ್ಯದ ಬೇಡಿಕೆ ಸೃಷ್ಟಿಯಾಗಲಿದೆ ಎಂದು ಎಸ್‌ಬಿಐ ಅಂದಾಜು ಮಾಡಿದೆ.

ಕುಸಿದ ರೂಪಾಯಿ

ಇದುವರೆಗೆ ಉಲ್ಲೇಖಿಸಿದ ಎರಡು ಪ್ರಮುಖ ವಿದ್ಯಮಾನಗಳು ‘ಬೆಲ್ಲ’ವನ್ನು ಪ್ರತಿನಿಧಿಸುವಂಥವು. ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು 90ಕ್ಕಿಂತ ಕೆಳಮಟ್ಟಕ್ಕೆ ಕುಸಿದು ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿದ್ದು 2025ರ ಕಹಿ ಸಂಗತಿಗಳಲ್ಲೊಂದು.

ವಿದೇಶಿ ಹೂಡಿಕೆದಾರರು ಭಾರತದ ಷೇರುಪೇಟೆಗಳಿಂದ ಹಣವನ್ನು ನಿರಂತರವಾಗಿ ಹಿಂಪಡೆದಿದ್ದು, ಜಾಗತಿಕ ಅನಿಶ್ಚಿತತೆಗಳ ಕಾರಣದಿಂದಾಗಿ ಹೂಡಿಕೆದಾರರು ಅಮೆರಿಕದ ಡಾಲರ್‌ನಲ್ಲಿ ಹೆಚ್ಚು ಹಣ ತೊಡಗಿಸಿದ್ದು, ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದ ಸುತ್ತಲಿನ ಅನಿಶ್ಚಿತತೆ ಕೊನೆಗೊಂಡಿಲ್ಲದಿರುವುದು ಸೇರಿದಂತೆ ರೂಪಾಯಿ ಕುಸಿತಕ್ಕೆ ಹಲವು ಕಾರಣಗಳನ್ನು ಆರ್ಥಿಕ ತಜ್ಞರು ನೀಡಿದ್ದಾರೆ. ಮೌಲ್ಯ ಕುಸಿತದಿಂದಾಗಿ ರಫ್ತು ಆಧಾರಿತ ಉದ್ದಿಮೆಗಳು ಖುಷಿ ಅನುಭವಿಸುವಂತೆ ಆಯಿತಾದರೂ, ಕಚ್ಚಾ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಕೈಗಾರಿಕೆಗಳಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ರೂಪಾಯಿ ಮೌಲ್ಯ ಇಳಿಕೆಯ ವಿದ್ಯಮಾನದಲ್ಲಿ ಕುತೂಹಲಕರ ಸಂಗತಿಯೊಂದಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ರೂಪಾಯಿ ಮೌಲ್ಯ ಕುಸಿದಿದ್ದಾಗ, ಅದು ಅರ್ಥ ವ್ಯವಸ್ಥೆಗೆ ಬಹಳ ದೊಡ್ಡ ಕೇಡು ಎಂಬಂತೆ ಮಾತನಾಡಿದ್ದ ರಾಜಕೀಯ ವರ್ಗವು ಈಗಿನ ಕುಸಿತವು ಅರ್ಥ ವ್ಯವಸ್ಥೆಗೆ ಒಂದು ಬಗೆಯಲ್ಲಿ ಒಳ್ಳೆಯದು ಎಂಬ ಸಂಕಥನವನ್ನು ಕಟ್ಟಲು ಯತ್ನಿಸಿದೆ!

ರೂಪಾಯಿ ಮೌಲ್ಯವು ಅಮೆರಿಕದ ಡಾಲರ್‌ ಎದುರು ಇದೇ ಬಗೆಯಲ್ಲಿ ಕುಸಿಯುತ್ತಲೇ ಸಾಗುತ್ತದೆಯೇ? ಅಂತಹ ಪರಿಸ್ಥಿತಿ ಉಂಟಾಗಲಿಕ್ಕಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ‘ಅರ್ಥ ವ್ಯವಸ್ಥೆಯಲ್ಲಿ ಸ್ಥಿರತೆ ಇದೆ, ಕರೆನ್ಸಿಯ ಮೌಲ್ಯವು ತಗ್ಗಿದೆ... ಅಲ್ಪಾವಧಿಯಲ್ಲಿ ರೂಪಾಯಿ ಮೌಲ್ಯವು ಡಾಲರ್‌ ಎದುರು 91ರಿಂದ 93ರವರೆಗೆ ಕುಸಿಯಬಹುದಾದರೂ 2026ರ ಅಂತ್ಯದ ಹೊತ್ತಿಗೆ 85–86ರ ಮಟ್ಟಕ್ಕೆ ಜಿಗಿಯುತ್ತದೆ’ ಎಂದು ಕೋಟಕ್‌ ಸೆಕ್ಯುರಿಟೀಸ್‌ನ ಕರೆನ್ಸಿ ವಿಭಾಗದ ಸಂಶೋಧನಾ ಮುಖ್ಯಸ್ಥೆ ಅನಿಂದ್ಯ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಇಳಿದ ಹಣದುಬ್ಬರ

2025ರಲ್ಲಿ ಭಾರತವು ದಶಕದ ಅತ್ಯಂತ ಕನಿಷ್ಠ ಮಟ್ಟದ ಹಣದುಬ್ಬರ ಪ್ರಮಾಣವನ್ನು ದಾಖಲಿಸಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣವನ್ನು ಶೇ 4ರ ಮಟ್ಟದಲ್ಲಿ ಕಾಯ್ದುಕೊಳ್ಳಬೇಕು ಎಂಬುದು ಕೇಂದ್ರ ಸರ್ಕಾರವು ಆರ್‌ಬಿಐಗೆ ನೀಡಿರುವ ಗುರಿ. ಆದರೆ ಈ ವರ್ಷದ ಅಕ್ಟೋಬರ್‌ನಲ್ಲಿ ಹಣದುಬ್ಬರವು ಶೇ 0.25ರ ಮಟ್ಟಕ್ಕೆ ಕುಸಿದಿತ್ತು. ಹಣದುಬ್ಬರದ ಇಳಿಕೆಯು ಖರೀದಿದಾರರಿಗೆ ಖುಷಿ ನೀಡಬಹುದಾದರೂ ಒಟ್ಟಾರೆ ಅರ್ಥವ್ಯವಸ್ಥೆಗೆ ಅದು ಒಳ್ಳೆಯದನ್ನೇ ಮಾಡುತ್ತದೆ ಎನ್ನಲಾಗದು. 

‘ಹಣದುಬ್ಬರವು ಬಹಳ ಕಾಲ ಕೆಳಮಟ್ಟದಲ್ಲೇ ಇರುವುದು ಅರ್ಥವ್ಯವಸ್ಥೆಯಲ್ಲಿ ಅಸಮತೋಲನ ಸೃಷ್ಟಿಸುತ್ತದೆ. ಈ ಹಿನ್ನೆಲೆಯಲ್ಲಿ ಆರ್‌ಬಿಐ ರೆಪೊ ದರವನ್ನು ತಗ್ಗಿಸಿ, ಆರ್ಥಿಕ ಬೆಳವಣಿಗೆಗೆ ಒತ್ತಾಸೆಯಾಗಿ ನಿಲ್ಲಲು, ಹಣದುಬ್ಬರವನ್ನು ತನಗೆ ನಿಗದಿ ಮಾಡಿರುವ ಗುರಿಯ ಮಟ್ಟಕ್ಕೆ ತರಲು ಯತ್ನಿಸುತ್ತಿದೆ’ ಎಂದು ‘ದಿ ವೆಲ್ತ್‌ ಕಂಪನಿ ಮ್ಯೂಚುವಲ್‌ ಫಂಡ್‌’ನ ಸಿಐಒ (ಸಾಲಪತ್ರ) ಉಮೇಶ್ ಶರ್ಮ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು.

ಷೇರುಪೇಟೆ: ಸಮಾಧಾನಕರ ವಹಿವಾಟು

2020ರ ನಂತರದಲ್ಲಿ ಭರ್ಜರಿ ಏರಿಕೆ ದಾಖಲಿಸಿದ್ದ ದೇಶದ ಷೇರುಪೇಟೆ 2025ರಲ್ಲಿ ಹೂಡಿಕೆದಾರರ ಪಾಲಿಗೆ ಹೆಚ್ಚಿನ ಲಾಭವನ್ನೇನೂ ನೀಡಿಲ್ಲ. ದೇಶದ 50 ಬ್ಲ್ಯೂಚಿಪ್‌ ಕಂಪನಿಗಳನ್ನು ಪ್ರತಿನಿಧಿಸುವ ನಿಫ್ಟಿ–50 ಸೂಚ್ಯಂಕವು ಈ ವರ್ಷ ಇದುವರೆಗೆ ಶೇ 10.25ರಷ್ಟು ಏರಿಕೆಯನ್ನು ಮಾತ್ರ ದಾಖಲಿಸಿದೆ. ವಿದೇಶಿ ಹೂಡಿಕೆದಾರರು ದೇಶದ ಷೇರುಪೇಟೆಗಳಿಂದ ನಿರಂತರವಾಗಿ ಹಣ ಹಿಂಪಡೆಯುತ್ತಿದ್ದಾರೆ. ವಿದೇಶಿ ಹೂಡಿಕೆದಾರರು ಮತ್ತೆ ಭಾರತದ ಮಾರುಕಟ್ಟೆಗಳತ್ತ ಮುಖ ಮಾಡುವವರೆಗೆ ಷೇರುಪೇಟೆಯಲ್ಲಿ ತೇಜಿ ವಹಿವಾಟು ನಡೆಯುವ ಸಾಧ್ಯತೆ ಕ್ಷೀಣ. ‘ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆಗಳು ಇದ್ದರೂ ದೇಶದ ಈಕ್ವಿಟಿ ಮಾರುಕಟ್ಟೆಯ ಮೌಲ್ಯವು ದೀರ್ಘಾವಧಿ ಹೂಡಿಕೆದಾರರಿಗೆ ಆಕರ್ಷಕವಾಗಿದೆ... ದೇಶದ ಅರ್ಥವ್ಯವಸ್ಥೆಯ ಮೂಲಭೂತ ಅಂಶಗಳು ಗಟ್ಟಿಯಾಗಿವೆ. ಹಣದುಬ್ಬರವು ಕಡಿಮೆ ಮಟ್ಟದಲ್ಲಿದೆ ಹಣಕಾಸಿನ ನೀತಿಗಳು ಪೂರಕವಾಗಿವೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ ಬಂಡವಾಳ ವೆಚ್ಚಗಳು ಜಾಸ್ತಿಯಾದಂತೆಲ್ಲ ಕಂಪನಿಗಳ ವರಮಾನವು ಹೆಚ್ಚಬಹುದು. ಇದು ದೀರ್ಘಾವಧಿಗೆ ಷೇರುಗಳನ್ನು ಖರೀದಿಸಲು ಆಕರ್ಷಕ ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ’ ಎಂದು ಎಡೆಲ್ವೈಸ್‌ ಲೈಫ್‌ ಇನ್ಶೂರೆನ್ಸ್‌ ಕಂಪನಿಯ ಮುಖ್ಯ ಹೂಡಿಕೆ ತಜ್ಞ ರಿತೇಶ್ ಟಿ. ಹೇಳಿದ್ದಾರೆ.

ಚಿನ್ನ ಬೆಳ್ಳಿಯ ನಾಗಾಲೋಟ

ಈ ವರ್ಷದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಹುಬ್ಬೇರಿಸುವ ಪ್ರಮಾಣದಲ್ಲಿ ಜಿಗಿತ ಕಂಡಿವೆ. ಜನವರಿ 1ರಂದು ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರವು ₹80440 ಆಗಿತ್ತು. ಇದು ಈಗ ₹139340ಕ್ಕೆ ಬಂದು ನಿಂತಿದೆ. ಬೆಳ್ಳಿಯ ಬೆಲೆಯು ಜನವರಿ 1ರಂದು ಬೆಂಗಳೂರಿನಲ್ಲಿ ಕೆ.ಜಿ.ಗೆ ₹91000 ಆಗಿತ್ತು. ಅದು ಈಗ ₹221800ಕ್ಕೆ ಬಂದಿದೆ. ‘ಚಿನ್ನ ಮತ್ತು ಬೆಳ್ಳಿಯ ದರ ಏರಿಕೆಯು ವಿನಾಕಾರಣ ಆಗುತ್ತಿರುವುದಲ್ಲ. ಜಾಗತಿಕ ಸವಾಲುಗಳು ಸರ್ಕಾರಗಳ ಕರೆನ್ಸಿಗಳಲ್ಲಿ ವಿಶ್ವಾಸ ಕಡಿಮೆ ಆಗಿರುವುದು ಈ ಬೆಲೆ ಏರಿಕೆಗೆ ಕಾರಣ. ಚಿನ್ನ ಬೆಳ್ಳಿ ಈಗ ಮಹತ್ವದ ಆಸ್ತಿಯಾಗಿ ಬದಲಾವಣೆ ಕಾಣುತ್ತಿವೆ’ ಎಂದು ಅನಿಂದ್ಯ ಬ್ಯಾನರ್ಜಿ ಹೇಳುತ್ತಾರೆ.

ಇತರ ಪ್ರಮಖ ಬೆಳವಣಿಗೆಗಳು
  • ಜಾಗತಿಕ ರೇಟಿಂಗ್ಸ್‌ ಸಂಸ್ಥೆ ಎಸ್‌ಆ್ಯಂಡ್‌ಪಿ ಆಗಸ್ಟ್‌ನಲ್ಲಿ ಭಾರತದ ರೇಟಿಂಗ್‌ ಮಟ್ಟವನ್ನು 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೇಲ್ದರ್ಜೆಗೆ ಏರಿಸಿತು‌

  • ವಿಮಾ ಕ್ಷೇತ್ರದಲ್ಲಿ ಶೇಕಡ 100ರಷ್ಟು ಎಫ್‌ಡಿಐಗೆ ಅವಕಾಶ ನೀಡುವ ಮಸೂದೆಗೆ ಸಂಸತ್ತು ಒಪ್ಪಿಗೆ ನೀಡಿತು

  • ದೇಶದ ಅತ್ಯಂತ ಪ್ರಮುಖ ಉದ್ಯಮ ಸಮೂಹಗಳಲ್ಲಿ ಒಂದಾದ ಟಾಟಾ ಸಮೂಹದ ಮಾಲೀಕತ್ವದ ಹೊಂದಿರುವ ಟಾಟಾ ಟ್ರಸ್ಟ್ಸ್‌ನಲ್ಲಿನ ಆಂತರಿಕ ಕಲಹ ಬಯಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.