ADVERTISEMENT

ಕೋವಿಡ್‌ ಪರಿಣಾಮಕ್ಕೆ ಜಿಡಿಪಿ ಕುಸಿಯಲಿದೆ: ಫಿಚ್‌, ಇಂಡಿಯಾ ರೇಟಿಂಗ್ಸ್‌

ಪಿಟಿಐ
Published 8 ಸೆಪ್ಟೆಂಬರ್ 2020, 12:41 IST
Last Updated 8 ಸೆಪ್ಟೆಂಬರ್ 2020, 12:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಉಂಟಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿಯು ಹೆಚ್ಚಿನ ಕುಸಿತ ಕಾಣಲಿದೆ ಎಂದು ರೇಟಿಂಗ್ಸ್‌ ಸಂಸ್ಥೆಗಳು ಅಂದಾಜು ಮಾಡಿವೆ.

ದೇಶದ ಆರ್ಥಿಕ ಬೆಳವಣಿಗೆಯ ಶೇಕಡ (–) 5ರಷ್ಟಿರಲಿದೆ ಎಂದು ಫಿಚ್‌ ರೇಟಿಂಗ್ಸ್‌ ಈ ಹಿಂದೆ ಹೇಳಿತ್ತು. ಅದನ್ನು ಈಗ ಪರಿಷ್ಕರಣೆ ಮಾಡಿದ್ದು, ಕುಸಿತವು ಶೇ (–) 10.5ರಷ್ಟಾಗಲಿದೆ ಎಂದು ಮಂಗಳವಾರ ಹೇಳಿದೆ.

ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇ (–)23.9ರಷ್ಟು ಕುಸಿತ ಕಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಫಿಚ್‌, ‘ಆರ್ಥಿಕ ಚಟುವಟಿಕೆಗಳು ಪುನರಾರಂಭ ಆಗುತ್ತಿರುವುದರಿಂದ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ಆರ್ಥಿಕತೆಯು ಉತ್ತಮ ಚೇತರಿಕೆ ಕಂಡುಕೊಳ್ಳಲಿದೆ. ಆದರೆ, ಆ ಚೇತರಿಕೆಯು ಮಂದಗತಿ ಮತ್ತು ಏರುಪೇರಿನಿಂದ ಕೂಡಿರಲಿದೆ’ ಎಂದು ಹೇಳಿದೆ.

ADVERTISEMENT

ಜುಲೈ–ಸೆಪ್ಟೆಂಬರ್‌ನಲ್ಲಿ ಜಿಡಿಪಿ ಶೇ (–) 9.6 ಮತ್ತು ಅಕ್ಟೋಬರ್‌–ಡಿಸೆಂಬರ್‌ನಲ್ಲಿ ಶೇ (–) 4.8 ಹಾಗೂ ಜನವರಿ–ಮಾರ್ಚ್‌ ಅವಧಿಯಲ್ಲಿ ಶೇ 4ರಷ್ಟು ಇರಲಿದೆ ಎಂದೂ ಅಂದಾಜು ಮಾಡಿದೆ.

ಕೋವಿಡ್‌ನ ಹೊಸ ಪ್ರಕರಣಗಳು ಹೆಚ್ಚಾಗುತ್ತಲೇ ಹೋಗಲಿವೆ. ಇದರಿಂದಾಗಿ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸಬೇಕಾಗಿ ಬರಲಿದೆ. ಸೋಂಕು ಹರಡುವಿಕೆ ಮತ್ತು ಆಗಾಗ್ಗೆ ಲಾಕ್‌ಡೌನ್‌ ಹೇರುವುದರಿಂದ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಅದು ತಿಳಿಸಿದೆ.

ಜಿಡಿಪಿ ಪರಿಷ್ಕರಿಸಿದ ಇಂಡ್‌ರಾ: ಇಂಡಿಯಾ ರೇಟಿಂಗ್ಸ್‌ ಸಂಸ್ಥೆ ಸಹ ದೇಶದ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಪರಿಷ್ಕರಿಸಿದೆ.

2020–21ರ ಆರ್ಥಿಕ ಬೆಳವಣಿಗೆಯು ಶೇ (–)11.8ರ ಮಟ್ಟದಲ್ಲಿ ಇರಲಿದೆ ಎಂದು ಹೇಳಿದೆ. ಈ ಹಿಂದೆ ಅದು, ಜಿಡಿಪಿ ಬೆಳವಣಿಗೆಯು ಶೇ (–) 5.3ರಷ್ಟು ಇರಲಿದೆ ಎಂದು ಅಂದಾಜು ಮಾಡಿತ್ತು. ಆದರೆ, 2021–22ರಲ್ಲಿ ಶೇ 9.9ರಷ್ಟು ಬೆಳವಣಿಗೆ ಕಾಣಲಿದೆ ಎಂದೂ ತಿಳಿಸಿದೆ.

ಹಣದುಬ್ಬರ: ಚಿಲ್ಲರೆ ಹಣದುಬ್ಬರ ಶೇ 5.1ರಷ್ಟು ಹಾಗೂ ಸಗಟು ಹಣದುಬ್ಬರ ಶೇ (–) 1.7ರಷ್ಟು ಇರುವ ಅಂದಾಜು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.