ನವದೆಹಲಿ: ಭಾರತ ವಿರುದ್ಧದ ದಾಳಿಯಲ್ಲಿ ಪಾಕಿಸ್ತಾನ ಬಳಸಿರುವ ಡ್ರೋನ್‌ಗಳನ್ನು ಟರ್ಕಿ ಪೂರೈಸಿದೆ. ಅಲ್ಲದೆ, ಪಾಕಿಸ್ತಾನವನ್ನು ಅಜರ್‌ಬೈಜಾನ್ ಬೆಂಬಲಿಸಿದೆ. ಹಾಗಾಗಿ, ಈ ಎರಡು ದೇಶಗಳಿಂದ ಆಮದಾಗುವ ಸರಕುಗಳಿಗೆ ಕೇಂದ್ರ ಸರ್ಕಾರವು ಬಹಿಷ್ಕಾರ ಹೇರಬೇಕು ಎಂದು ವರ್ತಕರ ವಲಯ ಒತ್ತಾಯಿಸಿದೆ.
ಜೊತೆಗೆ, ಈ ಎರಡು ದೇಶಗಳ ಪ್ರವಾಸೋದ್ಯಮಕ್ಕೂ ನಿರ್ಬಂಧ ಹೇರಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ. ಮತ್ತೊಂದೆಡೆ ಟರ್ಕಿಯಿಂದ ಭಾರತಕ್ಕೆ ಪ್ರಮುಖವಾಗಿ ಪೂರೈಕೆಯಾಗುವ ಸೇಬು ಮತ್ತು ಅಮೃತಶಿಲೆಯನ್ನು (ಮಾರ್ಬಲ್) ವರ್ತಕರ ವಲಯವು ಬಹಿಷ್ಕರಿಸಿದೆ.
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿ ಖಂಡಿಸಿ ಭಾರತವು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಟರ್ಕಿ ನಿರ್ಮಿಸಿದ ಡ್ರೋನ್‌ಗಳನ್ನು ಬಳಸಲಾಗಿತ್ತು. ಭಾರತೀಯ ಸೇನೆಯು ಈ ಡ್ರೋನ್‌ಗಳು ಹೊಡೆದುರುಳಿಸಿತ್ತು.
ಯಾವ ಉತ್ಪನ್ನಗಳು ರಫ್ತು
ಟರ್ಕಿಗೆ ಖನಿಜ ಇಂಧನ ಮತ್ತು ತೈಲ, ಎಲೆಕ್ಟ್ರಿಕಲ್ ಉಪಕರಣ, ವಾಹನ ಮತ್ತು ಅದರ ಬಿಡಿಭಾಗ, ರಾಸಾಯನಿಕ, ಔಷಧ, ಟ್ಯಾನಿಂಗ್ ಮತ್ತು ಡೈಯಿಂಗ್ ಪರಿಕರ, ಪ್ಲಾಸ್ಟಿಕ್, ರಬ್ಬರ್, ಹತ್ತಿ, ಫೈಬರ್, ಕಬ್ಬಿಣ ಮತ್ತು ಉಕ್ಕು ರಫ್ತಾಗುತ್ತದೆ. ಅಲ್ಲಿಂದ ಮುಖ್ಯವಾಗಿ ಸೇಬು, ಅಮೃತಶಿಲೆ, ಚಿನ್ನ, ತರಕಾರಿ, ಸುಣ್ಣ ಮತ್ತು ಸಿಮೆಂಟ್, ಖನಿಜ ತೈಲ, ರಾಸಾಯನಿಕ, ನೈಸರ್ಗಿಕ ಹರಳು, ಕಬ್ಬಿಣ ಮತ್ತು ಉಕ್ಕು ಆಮದಾಗುತ್ತದೆ.
ಭಾರತವು ಅಜರ್‌ಬೈಜಾನ್‌ಗೆ ಹೊಗೆಸೊಪ್ಪು ಮತ್ತು ಅದರ ಉತ್ಪನ್ನಗಳು, ಚಹ, ಕಾಫಿ, ದ್ವಿದಳಧಾನ್ಯ, ರಾಸಾಯನಿಕ, ಪ್ಲಾಸ್ಟಿಕ್, ರಬ್ಬರ್, ಕಾಗದ, ಸೆರಾಮಿಕ್ ಸರಕುಗಳನ್ನು ರವಾನಿಸುತ್ತದೆ. ಅಲ್ಲಿಂದ ಪಶು ಆಹಾರ, ರಾಸಾಯನಿಕ, ಸಾರವರ್ಧಿತ ತೈಲ, ಸುಗಂಧ ದ್ರವ್ಯ, ಚರ್ಮವನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ರಫ್ತು ಪ್ರಮಾಣ ಎಷ್ಟು?
2024–25ನೇ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಫೆಬ್ರುವರಿವರೆಗೆ ಭಾರತವು ಟರ್ಕಿಗೆ ₹44400 ಕೋಟಿ ಮೌಲ್ಯದ ಸರಕುಗಳನ್ನು ರಫ್ತು ಮಾಡಿದೆ. ದೇಶದ ಒಟ್ಟು ರಫ್ತಿನ ಪೈಕಿ ಈ ಪಾಲು ಶೇ 1.5ರಷ್ಟಿದೆ. ಇದೇ ಅವಧಿಯಲ್ಲಿ ಅಜರ್‌ಬೈಜಾನ್‌ಗೆ ₹735 ಕೋಟಿ ಮೌಲ್ಯದ ಸರಕುಗಳು ರಫ್ತಾಗಿವೆ. ಟರ್ಕಿಯಿಂದ ಭಾರತವು ಇದೇ ಅವಧಿಯಲ್ಲಿ ₹24200 ಕೋಟಿ ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ದೇಶದ ಒಟ್ಟು ಆಮದಿನ ಪೈಕಿ ಈ ಪಾಲು ಶೇ 0.5ರಷ್ಟಿದೆ. ಅಜರ್‌ಬೈಜಾನ್‌ನಿಂದ ₹16.50 ಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿದೆ.
ತಗ್ಗಿದ ಟಿಕೆಟ್ ಬುಕಿಂಗ್
ಸಾಮಾಜಿಕ ಜಾಲತಾಣಗಳಲ್ಲಿ ಈ ರಾಷ್ಟ್ರಗಳಿಗೆ ಪ್ರವಾಸ ತೆರಳುವುದನ್ನು ಬಹಿಷ್ಕರಿಸಬೇಕು ಎಂಬ ಅಭಿಯಾನ ಜೋರಾಗಿರುವ ಬೆನ್ನಲ್ಲೇ ಬುಕಿಂಗ್ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಆನ್‌ಲೈನ್ ಟ್ರಾವೆಲ್ ಕಂಪನಿಯಾದ ಮೇಕ್‌ಮೈಟ್ರಿಪ್ ತಿಳಿಸಿದೆ. ಎರಡು ದೇಶಗಳ ಪ್ರವಾಸದ ಬುಕಿಂಗ್‌ನಲ್ಲಿ ಶೇ 60ರಷ್ಟು ಕಡಿಮೆಯಾಗಿದೆ. ಟಿಕೆಟ್ ರದ್ದತಿಯು ಶೇ 250ರಷ್ಟಕ್ಕೆ ಮುಟ್ಟಿದೆ ಎಂದು ಹೇಳಿದೆ. ಕಳೆದ ಒಂದು ವಾರದಿಂದ ಈ ದೇಶಗಳ ನಿಲುವಿನ ವಿರುದ್ಧ ಭಾರತದ ಪ್ರವಾಸಿಗರು ಅಸಮಾಧಾನಗೊಂಡಿದ್ದಾರೆ. ಹಾಗಾಗಿ ಅಲ್ಲಿಗೆ ತೆರಳುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದೆ. ‘ದೇಶದ ಏಕತೆಯೇ ನಮ್ಮ ಧ್ಯೇಯ. ಭಾರತೀಯ ಸೇನೆಯ ಹೋರಾಟಕ್ಕೆ ಗೌರವ ಸಲ್ಲಿಸುತ್ತೇವೆ. ಪ್ರವಾಸಿಗರ ನಿಲುವಿಗೆ ನಾವು ಬೆಂಬಲ ನೀಡುತ್ತೇವೆ. ಈ ದೇಶಗಳಿಗೆ ಅನಗತ್ಯ ಪ್ರವಾಸ ಮಾಡದಂತೆ ಸಲಹೆಯನ್ನೂ ನೀಡಲಾಗುತ್ತಿದೆ’ ಎಂದು ಮೇಕ್‌ಮೈಟ್ರಿಪ್ ವಕ್ತಾರರು ತಿಳಿಸಿದ್ದಾರೆ.
ಭಾರತೀಯರು ಎಷ್ಟಿದ್ದಾರೆ?
ಟರ್ಕಿಯಲ್ಲಿ 3 ಸಾವಿರಕ್ಕೂ ಹೆಚ್ಚು ಭಾರತೀಯರಿದ್ದು ಈ ಪೈಕಿ ವಿದ್ಯಾರ್ಥಿಗಳ ಸಂಖ್ಯೆ 200 ಆಗಿದೆ. ಅಜರ್‌ಬೈಜಾನ್‌ನಲ್ಲಿ 1500ಕ್ಕೂ ಹೆಚ್ಚು ಭಾರತೀಯರು ನೆಲಸಿದ್ದಾರೆ. 2023ರಲ್ಲಿ ಟರ್ಕಿಗೆ 3 ಲಕ್ಷ ಭಾರತೀಯ ಪ್ರವಾಸಿಗರು ಭೇಟಿ ನೀಡಿದ್ದರೆ ಇದೇ ಅವಧಿಯಲ್ಲಿ ಅಜರ್‌ಬೈಜಾನ್‌ಗೆ ಭೇಟಿ ನೀಡಿದ ಭಾರತೀಯರ ಸಂಖ್ಯೆ 2 ಲಕ್ಷಕ್ಕೂ ಹೆಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.