ADVERTISEMENT

ತಾಳೆ ಎಣ್ಣೆ ಆಮದು ಶೇ 18ರಷ್ಟು ಹೆಚ್ಚಳ

ರಾಯಿಟರ್ಸ್
Published 13 ಏಪ್ರಿಲ್ 2022, 15:55 IST
Last Updated 13 ಏಪ್ರಿಲ್ 2022, 15:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ತಾಳೆ ಎಣ್ಣೆ ಆಮದು ಪ್ರಮಾಣವು ಫೆಬ್ರುವರಿಗೆ ಹೋಲಿಸಿದರೆ ಮಾರ್ಚ್‌ನಲ್ಲಿ ಶೇಕಡ 18.7ರಷ್ಟು ಹೆಚ್ಚಾಗಿದೆ.

ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆ ಖರೀದಿಸಲು ಸಾಧ್ಯವಾಗದೇ ಇರುವುದರಿಂದ ವ್ಯಾಪಾರಿಗಳು ಬೇರೆ ಅಡುಗೆ ಎಣ್ಣೆ ಖರೀದಿಗೆ ಮುಂದಾಗಿದ್ದಾರೆ. ಹೀಗಾಗಿ ತಾಳೆ ಎಣ್ಣೆ ಆಮದು ಹೆಚ್ಚಾಗಿದೆ ಎಂದು ಸಾಲ್ವೆಂಟ್‌ ಎಕ್ಸ್‌ಟ್ರ್ಯಾಕ್ಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಎಸ್‌ಇಎ) ಬುಧವಾರ ತಿಳಿಸಿದೆ.

ಭಾರತವು ಮುಂದಿನ ದಿನಗಳಲ್ಲಿ ಮಲೇಷ್ಯಾದಿಂದ ತಾಳೆ ಎಣ್ಣೆ ಆಮದು ಮಾಡಿಕೊಳ್ಳಲು ಮುಂದಾಗಬಹುದು ಎಂದು ಹೇಳಿದೆ.

ADVERTISEMENT

ಫೆಬ್ರುವರಿಯಲ್ಲಿ 4.54 ಲಕ್ಷ ಟನ್‌ ತಾಳೆ ಎಣ್ಣೆ ಆಮದಾಗಿತ್ತು. ಇದಕ್ಕೆ ಹೋಲಿಸಿದರೆ ಮಾರ್ಚ್‌ನಲ್ಲಿ 5.39 ಲಕ್ಷ ಟನ್‌ ಆಮದಾಗಿದೆ ಎಂದು ಎಸ್‌ಇಎ ಪ್ರಕಟಣೆಯಲ್ಲಿ ತಿಳಿಸಿದೆ.

ಸೂರ್ಯಕಾಂತಿ ಎಣ್ಣೆ ಆಮದು 2.12 ಲಕ್ಷ ಟನ್‌ ಆಗಿದೆ. ರಷ್ಯಾವು ಉಕ್ರೇನ್‌ ಮೇಲೆ ಸಮರ ಸಾರುವುದಕ್ಕೂ ಮೊದಲೇ ಕೆಲವು ಹಡಗುಗಳು ಉಕ್ರೇನ್‌ನಿಂದ ಹೊರಟಿದ್ದವು. ಹೀಗಾಗಿ ಈ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದೆ.

ಏಪ್ರಿಲ್‌ನಲ್ಲಿ ಈವರೆಗೆ ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆ ಆಮದಾಗಿಲ್ಲ. ಸೋಯಾ ಎಣ್ಣೆ ಆಮದು 3.76 ಲಕ್ಷ ಟನ್‌ಗಳಿಂದ 2.99 ಲಕ್ಷ ಟನ್‌ಗಳಿಗೆ ಇಳಿಕೆ ಆಗುವ ಸಾಧ್ಯತೆ ಇದೆ ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.