ADVERTISEMENT

ಸರ್ಕಾರಿ ತೈಲ ಮಾರಾಟ ಕಂಪನಿಗಳಿಗೆ ₹ 21,270 ಕೋಟಿ ನಷ್ಟ ಸಾಧ್ಯತೆ

ಸತತ ಎರಡನೇ ತ್ರೈಮಾಸಿಕದಲ್ಲಿಯೂ ನಷ್ಟ ಸಂಭವ

ಪಿಟಿಐ
Published 9 ಅಕ್ಟೋಬರ್ 2022, 12:38 IST
Last Updated 9 ಅಕ್ಟೋಬರ್ 2022, 12:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸತತ ಎರಡನೇ ತ್ರೈಮಾಸಿಕದಲ್ಲಿಯೂ ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ಐಸಿಐಸಿಐ ಸೆಕ್ಯುರಿಟೀಸ್‌ ಹೇಳಿದೆ.

ಇಂಡಿಯನ್‌ ಆಯಿಲ್‌ (ಐಒಸಿ), ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್‌) ಮತ್ತು ಹಿಂದುಸ್ತಾನ್‌ ಪೆಟ್ರೋಲಿಯಂ (ಎಚ್‌ಪಿಸಿಎಲ್‌) ಕಂಪನಿಗಳು ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಬೆಲೆಗೆ ಪೆಟ್ರೋಲ್‌, ಡೀಸೆಲ್‌ ಮಾರಾಟ ಮಾಡುತ್ತಿವೆ. ಹೀಗಾಗಿ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಈ ಕಂಪನಿಗಳ ಒಟ್ಟಾರೆ ನಷ್ಟವು ₹ 21,270 ಕೋಟಿ ಆಗುವ ಸಾಧ್ಯತೆ ಇದೆ ಎಂದು ಅದು ತಿಳಿಸಿದೆ.

ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌–ಜೂನ್‌) ಈ ಕಂಪನಿಗಳ ಒಟ್ಟಾರೆ ನಷ್ಟವು ₹ 18,480 ಕೋಟಿ ಆಗಿತ್ತು. ಈ ಕಂಪನಿಗಳು ನವೆಂಬರ್‌ ತಿಂಗಳಿಗೂ ಮುನ್ನ ತಮ್ಮ ಎರಡನೇ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಲಿವೆ.

ADVERTISEMENT

ಕಚ್ಚಾ ತೈಲ ದರ ಏರಿಕೆ ಮತ್ತು ರೂಪಾಯಿ ಕುಸಿತದ ಕಾರಣ ತಯಾರಿಕಾ ವೆಚ್ಚ ಹೆಚ್ಚುತ್ತಲೇ ಇದೆ. ಹೀಗಿದ್ದರೂ ಆರು ತಿಂಗಳಿಗೂ ಅಧಿಕ ಸಮಯದದಿಂದ ಸರ್ಕಾರಿ ಸ್ವಾಮ್ಯದ ಕಂಪನಿಗಳು ಪೆಟ್ರೋಲ್‌, ಡೀಸೆಲ್‌ ದರ ಬದಲಾವಣೆ ಮಾಡಿಲ್ಲ.

ಐಸಿಐಸಿಐ ಸೆಕ್ಯುರಿಟೀಸ್‌ ಪ್ರಕಾರ, ದೇಶದ ಅತಿದೊಡ್ಡ ತೈಲ ಮಾರಾಟ ಕಂಪನಿ ಐಒಸಿ ₹ 6,300 ಕೋಟಿ ನಿವ್ವಳ ನಷ್ಟ ಕಾಣಲಿದೆ. ಬಿಪಿಸಿಎಲ್‌ ₹ 6,900 ಕೋಟಿ ಮತ್ತು ಎಚ್‌ಪಿಸಿಎಲ್‌ ₹ 8,100 ಕೋಟಿ ನಷ್ಟ ಅನುಭವಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.