
ಮುಂಬೈ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದಿಂದಾಗಿ ದೇಶದಿಂದ ರಫ್ತಾಗಬೇಕಿದ್ದ 4 ಲಕ್ಷ ಟನ್‌ನಷ್ಟು ಬಾಸ್ಮತಿ ಅಕ್ಕಿ ರಫ್ತಿಗೆ ತೊಂದರೆ ಉಂಟಾಗಿದೆ.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ಮಾಡಿದ ನಂತರ ಸರಕು ಸಾಗಣೆ ದರವು ಎರಡು ಪಟ್ಟು ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತವು ವಿಶ್ವದಲ್ಲಿಯೇ ಅತಿದೊಡ್ಡ, ಪ್ರೀಮಿಯಂ ಗುಣಮಟ್ಟದ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡುವ ರಾಷ್ಟ್ರವಾಗಿದೆ. ಸೌದಿ ಅರೇಬಿಯಾ, ಇರಾನ್, ಯುಎಇ ಸೇರಿದಂತೆ ಪಶ್ಚಿಮ ಏಷ್ಯಾವು ಬಾಸ್ಮತಿ ಅಕ್ಕಿ ಖರೀದಿ ಮಾಡುತ್ತವೆ.
‘ಯುದ್ಧದಿಂದ ಪಶ್ಚಿಮ ಏಷ್ಯಾದಲ್ಲಿ ಹಡಗುಗಳ ಸಾಗಣೆಗೆ ಅಡ್ಡಿ ಉಂಟಾಗಿದೆ. ಇದರಿಂದ ಸುಮಾರು 2 ಲಕ್ಷ ಟನ್ ಬಾಸ್ಮತಿ ಅಕ್ಕಿ ಸಾಗಣೆಯ ಮಾರ್ಗದಲ್ಲಿ ಸಿಲುಕಿಕೊಂಡಿದ್ದರೆ, ಇಷ್ಟೇ ಪ್ರಮಾಣದ ಅಕ್ಕಿಯು ದೇಶದ ಬಂದರುಗಳಲ್ಲಿಯೇ ಉಳಿದುಕೊಂಡಿದೆ’ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘದ (ಎಐಆರ್‌ಇಎ) ಅಧ್ಯಕ್ಷ ಸತೀಶ್ ಗೋಯಲ್ ಹೇಳಿದ್ದಾರೆ.
ರಫ್ತುದಾರರು ಈಗಾಗಲೇ ಬಾಸ್ಮತಿ ಅಕ್ಕಿಯನ್ನು ಬಂದರುಗಳಿಗೆ ಸಾಗಿಸಿದ್ದಾರೆ. ಆದರೆ, ಸಾಗಣೆ ವೆಚ್ಚ ಹೆಚ್ಚಳದಿಂದ ಪಶ್ಚಿಮ ಏಷ್ಯಾದ ದೇಶಗಳಿಗೆ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಇಷ್ಟು ದೊಡ್ಡ ಮಟ್ಟದ ಸರಕನ್ನು ಖರೀದಿಸುವ ಪರ್ಯಾಯ ಮಾರುಕಟ್ಟೆ ಇಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.