ADVERTISEMENT

ಬಜೆಟ್‌ನಲ್ಲಿ ಐ.ಟಿ ವಿನಾಯ್ತಿ?: ಕೇಂದ್ರ ಸರ್ಕಾರಕ್ಕೆ ಸಂಪನ್ಮೂಲ ಸಂಗ್ರಹದ ಒತ್ತಡ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 4:36 IST
Last Updated 27 ಡಿಸೆಂಬರ್ 2019, 4:36 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ನವದೆಹಲಿ: ಸರಕು ಮತ್ತು ಸೇವೆಗಳ ಬಳಕೆ ಉತ್ತೇಜಿಸಿ ಆರ್ಥಿಕತೆ ಪುಟಿದೇಳುವಂತೆ ಮಾಡಲು ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಕೆಲ ಮಟ್ಟಿಗೆ ವಿನಾಯ್ತಿ ನೀಡುವ ಪ್ರಸ್ತಾವ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿ ಇದೆ.

ಮುಂದಿನ ನಾಲ್ಕು ವರ್ಷಗಳಲ್ಲಿ ಮೂಲ ಸೌಕರ್ಯ ವಲಯಕ್ಕೆ ₹ 100 ಲಕ್ಷ ಕೋಟಿ ಮೊತ್ತದ ಸಂಪನ್ಮೂಲ ಸಂಗ್ರಹಿಸುವ ತೀವ್ರ ಒತ್ತಡದಲ್ಲಿ ಇರುವ ಸರ್ಕಾರ, ಆದಾಯ ತೆರಿಗೆ ವಿಷಯದಲ್ಲಿ ಹೆಚ್ಚು ಉದಾರತೆ ತೋರುವ ಸಾಧ್ಯತೆ ಕಂಡುಬರುತ್ತಿಲ್ಲ.

ಕಾರ್ಪೊರೇಟ್‌ ತೆರಿಗೆ ಕಡಿತದ ಮಾದರಿಯಲ್ಲಿ ಆದಾಯ ತೆರಿಗೆಯಲ್ಲಿಯೂ ಕೆಲಮಟ್ಟಿಗೆ ಸಡಿಲಿಕೆ ಪ್ರಕಟಿಸಬಹುದು. ₹ 5 ಲಕ್ಷದಿಂದ ₹ 10 ಲಕ್ಷದವರೆಗಿನ ಆದಾಯಕ್ಕೆ ವಿಧಿಸಲಾಗುವ ತೆರಿಗೆ ದರವನ್ನು ಸದ್ಯದ ಶೇ 20ರಿಂದ ಶೇ 10ಕ್ಕೆ ಕಡಿತ ಮಾಡುವುದನ್ನು ಮಾತ್ರ ಪರಿಶೀಲಿಸಲಾಗುತ್ತಿದೆ. ಹೀಗೆ ಮಾಡುವುದರಿಂದ ಮಧ್ಯಮ ವರ್ಗದವರು ಮತ್ತು ವೇತನದಾರರಿಗೆ ಹೆಚ್ಚು ಪ್ರಯೋಜನವಾಗಲಿದೆ. ಇದರಿಂದ ಗೃಹ ನಿರ್ಮಾಣ, ವಾಹನ ಖರೀದಿ, ಸರಕುಗಳ ತಯಾರಿಕೆ ಮತ್ತು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಲಿದೆ. ಅದರ ಫಲವಾಗಿ ಮಂದಗತಿಯ ಆರ್ಥಿಕತೆಯು ಪುಟಿದೇಳುವ ನಿರೀಕ್ಷೆ ಇದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ADVERTISEMENT

ಸದ್ಯಕ್ಕೆ ಜಾರಿಯಲ್ಲಿ ಇರುವ ₹ 2.50 ಲಕ್ಷದವರೆಗಿನ ಆದಾಯಕ್ಕೆ ಇರುವ ತೆರಿಗೆ ವಿನಾಯ್ತಿ ಮಿತಿ ಹೆಚ್ಚಿಸುವ ಪ್ರಸ್ತಾವವೂ ಸದ್ಯಕ್ಕೆ ಕಂಡುಬರುತ್ತಿಲ್ಲ. ಐ.ಟಿ ರಿಟರ್ನ್ಸ್‌ ಸಲ್ಲಿಸುವವರು ತೆರಿಗೆ ವ್ಯಾಪ್ತಿಯಿಂದ ಹೊರಗುಳಿದು ವರಮಾನ ಖೋತಾ ಆಗಬಾರದು ಎನ್ನುವುದು ಸರ್ಕಾರದ ಧೋರಣೆಯಾಗಿದೆ.

ಸಾಧಕ – ಬಾಧಕ ಪರಿಶೀಲನೆ: ಗರಿಷ್ಠ ಆದಾಯದವರನ್ನು ಹೊಸ ತೆರಿಗೆ ಹಂತದ ವ್ಯಾಪ್ತಿಗೆ ತರುವುದೂ ಸೇರಿದಂತೆ ತೆರಿಗೆ ದರ ಕಡಿತದ ಪ್ರಸ್ತಾವದ ಸಾಧಕ – ಬಾಧಕಗಳನ್ನು ಸಚಿವಾಲಯವು ಪರಿಶೀಲಿಸುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ಸಮಿತಿಯು ತೀರ್ಮಾನ ಕೈಗೊಳ್ಳಲಿದೆ. ತೆರಿಗೆದಾರರಿಗೆ ಉತ್ತೇಜನ ನೀಡುವಂತಹ ಎಲ್ಲ ಪ್ರಸ್ತಾವಗಳನ್ನು ಪರಿಶೀಲಿಸಲಾಗುತ್ತಿದೆ. ಅಂತಿಮವಾಗಿ ಎಲ್ಲ ದೃಷ್ಟಿಕೋನದಿಂದಲೂ ಲಾಭದಾಯಕವಾಗುವ ನಿರ್ಧಾರಕ್ಕೆ ಬರಲಾಗುವುದು ಎಂದು ಮೂಲಗಳು ತಿಳಿಸಿವೆ.

ಮೂಲಸೌಕರ್ಯ ವಲಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಳ ಮತ್ತು ಪ್ರಧಾನಮಂತ್ರಿ ಕಿಸಾನ್‌ ಯೋಜನೆಗಳಂತಹ ಸರ್ಕಾರಿ ಕಾರ್ಯಕ್ರಮಗಳಲ್ಲಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ ಮೂಲಕ ಜನರ ಕೈಯಲ್ಲಿ ಹೆಚ್ಚು ಹಣ ಇರುವಂತೆ ನೋಡಿಕೊಳ್ಳಲು ಉದ್ದೇಶಿಸಲಾಗಿದೆ. ಬಳಕೆಗೆ ಉತ್ತೇಜನ ನೀಡುವುದು ಮತ್ತು ಬೊಕ್ಕಸಕ್ಕೆ ಬೀಳುವ ಹೊರೆಯ ಮಧ್ಯೆ ಸಮತೋಲನ ಸಾಧಿಸುವುದು ಸರ್ಕಾರದ ಆಲೋಚನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.