ಮುಂಬೈ: ಮುಂಬೈ ಮಹಾನಗರ ಪ್ರದೇಶದ ವ್ಯಾಪ್ತಿಯಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದೆ. ಇದನ್ನು ತಡೆಗಟ್ಟಲು ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಸಂಚಾರ ನಿಷೇಧ ಸಂಬಂಧ ಅಧ್ಯಯನ ನಡೆಸಲು ಮಹಾರಾಷ್ಟ್ರ ಸರ್ಕಾರ ಸಮಿತಿ ರಚಿಸಿದೆ.
ನಿವೃತ್ತ ಐಎಎಸ್ ಅಧಿಕಾರಿ ಸುಧೀರ್ ಕುಮಾರ್ ಶ್ರೀವಾಸ್ತವ ಈ ಸಮಿತಿ ಮುಖ್ಯಸ್ಥರಾಗಿದ್ದಾರೆ. ಸಮಿತಿಯು ಅಧ್ಯಯನ ನಡೆಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಮಹಾರಾಷ್ಟ್ರ ಸಾರಿಗೆ ಆಯುಕ್ತರು, ಮುಂಬೈ ಜಂಟಿ ಪೊಲೀಸ್ ಆಯುಕ್ತರು (ಸಂಚಾರ), ಮಹಾನಗರ್ ಗ್ಯಾಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ, ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣೆ ಕಂಪನಿ ನಿಗಮದ (ಮಹಾವಿತರಣ್) ಯೋಜನಾ ವ್ಯವಸ್ಥಾಪಕ, ಭಾರತೀಯ ವಾಹನ ತಯಾರಕರ ಒಕ್ಕೂಟದ (ಎಸ್‌ಐಎಎಂ) ಅಧ್ಯಕ್ಷ ಮತ್ತು ಜಂಟಿ ಸಾರಿಗೆ ಆಯುಕ್ತ (ಜಾರಿ–1) ಸಮಿತಿಯ ಇತರೆ ಸದಸ್ಯರಾಗಿರುತ್ತಾರೆ.
ಮುಂಬೈ ಮಹಾನಗರ ಪ್ರದೇಶವು (ಎಂಎಂಆರ್) ಥಾಣೆ, ರಾಯಗಢ ಮತ್ತು ಪಾಲ್ಘರ್ ಜಿಲ್ಲೆಗಳನ್ನು ಒಳಗೊಂಡಿದೆ.
ಜನವರಿ 9ರಂದು ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್, ಮುಂಬೈ ಮಹಾನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಮತ್ತು ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು. ಇದು ಜನರ ಗುಣಮಟ್ಟದ ಜೀವನ, ಪರಿಸರ ಮತ್ತು ಸುಸ್ಥಿರತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.