
ಭತ್ತದ ಕೊಯ್ಲು
ನವದೆಹಲಿ: ದೇಶದಲ್ಲಿ ಈ ಬಾರಿ ಮುಂಗಾರು ಅಕ್ಟೋಬರ್‌ಗೆ ಅಂತ್ಯಗೊಂಡಿದ್ದು, ಭತ್ತ ಇಳುವರಿ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಮತ್ತೊಂದೆಡೆ ಬೇಳೆಕಾಳು, ಹತ್ತಿ ಮತ್ತು ಎಣ್ಣೆ ಕಾಳುಗಳ ಇಳುವರಿ ಇಳಿಮುಖವಾಗುವ ಸಾಧ್ಯತೆ ಹೆಚ್ಚು ಎಂದು ಕೃಷಿ ಸಚಿವಾಲಯ ಬುಧವಾರ ಅಂದಾಜಿಸಿದೆ.
ಭತ್ತದ ಇಳುವರಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 1.4ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಮುಂಗಾರಿನ ಬೆಳೆಯಲ್ಲಿ 169.5 ದಶಲಕ್ಷ ಟನ್‌ನಷ್ಟು ಭತ್ತವನ್ನು ದೇಶದಲ್ಲಿ ಬೆಳೆಯಲಾಗಿತ್ತು. ಈ ಬಾರಿ ಇದು 173.3 ದಶಲಕ್ಷ ಟನ್‌ಗೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದಿದೆ.
‘ದೇಶದ ಹಲವೆಡೆ ಮಳೆ ಹೆಚ್ಚಳವಾಗಿರುವುದೂ ಬೆಳೆಗಳ ಇಳುವರಿಯ ಮೇಲೆ ಪರಿಣಾಮ ಬೀರಿದೆ. ಈ ಬಾರಿಯ ಮುಂಗಾರು ದೇಶದ ಹಲವೆಡೆ ಸಕಾರಾತ್ಮಕ ಪರಿಣಾಮಗಳನ್ನು ಬೀರಿದೆ. ಅದರಿಂದಾಗಿ ಬೆಳೆಯೂ ಉತ್ತಮವಾಗಿದೆ’ ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಹೇಳಿದ್ದಾರೆ.
ಮೆಕ್ಕೆಜೋಳದ ಇಳುವರಿ 2.83 ಕೋಟಿ ಟನ್ (ಕಳೆದ ಸಾಲಿನಲ್ಲಿ 2.48 ಕೋಟಿ ಟನ್), ಬೇಳೆಕಾಳುಗಳು 74 ಲಕ್ಷ ಟನ್ (ಕಳೆದ ವರ್ಷ 77 ಲಕ್ಷ ಟನ್), ತೊಗರಿ ಬೇಲೆ 35.9 ಲಕ್ಷ ಟನ್ (ಕಳೆದ ಸಾಲಿನಲ್ಲಿ 36.2 ಲಕ್ಷ ಟನ್), ಉದ್ದು ಇಳುವರಿಯು 12 ಲಕ್ಷ ಟನ್ (ಕಳೆದ ವರ್ಷ 13.4ಲಕ್ಷ ಟನ್) ಇಳುವರಿ ನಿರೀಕ್ಷಿಸಲಾಗುತ್ತಿದೆ.
ಎಣ್ಣೆಕಾಳುಗಳ ಇಳುವರಿಯು 2.7 ಕೋಟಿ ಟನ್ ಎಂದು ಅಂದಾಜಿಸಲಾಗಿದೆ. ಕಳೆದ ಸಾಲಿನಲ್ಲಿ ಇದು 2.8 ಕೋಟಿ ಟನ್ ಇತ್ತು. ಸೋಯಾಬೀನ್ ಇಳುವರಿಯು ಕಳೆದ ಸಾಲಿನಲ್ಲಿ 1.5 ಕೋಟಿ ಟನ್ ಇತ್ತು. ಅದು ಈ ವರ್ಷ 1.4 ಕೋಟಿ ಟನ್‌ಗೆ ಕುಸಿಯುವ ಸಾದ್ಯತೆ ಇದೆ. ಶೇಂಗಾ ಉತ್ಪಾದನೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಕಳೆದ ಸಾಲಿನಲ್ಲಿ ಒಂದು ಕೋಟಿ ಟನ್ ಇದ್ದ ಇಳುವರಿ, ಈ ಬಾರಿ 1.1 ಕೋಟಿ ಟನ್‌ಗೆ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಸಚಿವ ಶಿವರಾಜ್ ಸಿಂಗ್ ಹೇಳಿದ್ದಾರೆ.
ಕಬ್ಬಿನ ಇಳುವರಿಯೂ ಈ ಬಾರಿ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ಸಾಲಿನಲ್ಲಿ 45.46 ಕೋಟಿ ಟನ್ ಇಳುವರಿ ದೊರಕಿತ್ತು. ಈ ಬಾರಿ ಅದು 47.56 ಕೋಟಿ ಟನ್‌ಗೆ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.
ಹತ್ತಿ ಇಳುವರಿ ಕುಸಿಯುವ ಸಾಧ್ಯತೆ ಇದೆ. ಕಳೆದ ವರ್ಷ 2.97 ಕೋಟಿ ಪಿಂಡಿ (ಒಂದು ಪಿಂಡಿ–170 ಕೆ.ಜಿ.) ಇಳುವರಿ ದಾಖಲಾಗಿತ್ತು. ಈ ಬಾರಿ ಅದು 2.92 ಕೋಟಿ ಪಿಂಡಿಯಷ್ಟು ನಿರೀಕ್ಷಿಸಲಾಗುತ್ತಿದೆ. ಉಳಿದಂತೆ ಜೂಟ್, ಮೆಸ್ಟಾ ಇಳುವರಿಯೂ ಕುಂಠಿತವಾಗಲಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.
ವರ್ಷದ ಬೆಳೆ ಇಳುವರಿಯ ಅಂತಿಮ ಅಂಕಿಅಂಶಗಳ ಪೂರ್ವದಲ್ಲಿ ಕೃಷಿ ಸಚಿವಾಲಯವು ನಾಲ್ಕು ಬಾರಿ ಅಂದಾಜು ಅಂಕಿಅಂಶವನ್ನು ಬಿಡುಗಡೆ ಮಾಡುತ್ತದೆ. ಅದು ಆಯಾ ಬೆಳೆಗಳ ಕೊಯ್ಲೋತ್ತರ ಅಂಕಿಅಂಶಗಳನ್ನು ಆಧರಿಸಿರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.