ADVERTISEMENT

ಟಾಟಾ ಸನ್ಸ್‌ಗೆ ಮರಳಲು ಆಸಕ್ತಿ ಇಲ್ಲ: ಸೈರಸ್‌ ಮಿಸ್ತ್ರಿ

ಪಿಟಿಐ
Published 5 ಜನವರಿ 2020, 13:46 IST
Last Updated 5 ಜನವರಿ 2020, 13:46 IST
ಸೈರಸ್‌ ಮಿಸ್ತ್ರಿ
ಸೈರಸ್‌ ಮಿಸ್ತ್ರಿ   

ಮುಂಬೈ: ಟಾಟಾ ಸನ್ಸ್‌ಗೆ ಯಾವುದೇ ಹುದ್ದೆಯ ಸ್ವರೂಪದಲ್ಲಿ ಮರಳಲು ತಮಗೆ ಆಸಕ್ತಿ ಇಲ್ಲ ಎಂದು ಪದಚ್ಯುತ ಅಧ್ಯಕ್ಷ ಸೈರಸ್‌ ಮಿಸ್ತ್ರಿ ಹೇಳಿದ್ದಾರೆ.

‘ಟಾಟಾ ಸಮೂಹದ ಒಟ್ಟಾರೆ ಹಿತಾಸಕ್ತಿ ದೃಷ್ಟಿಯಿಂದ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಯಾವುದೇ ವ್ಯಕ್ತಿಗಿಂತ ಕಂಪನಿಯ ಹಿತಾಸಕ್ತಿ ಮುಖ್ಯ’ ಎಂದು ಅವರು ಭಾನುವಾರ ಸಂಜೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿಯು (ಎನ್‌ಸಿಎಲ್‌ಎಟಿ) ನನ್ನ ಪರವಾಗಿ ಆದೇಶ ನೀಡಿದ್ದರೂ, ನಾನು ಟಾಟಾ ಸನ್ಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷನಾಗಿ ಮುಂದುವರೆಯಲು ಬಯಸುವುದಿಲ್ಲ. ಕಂಪನಿಯಲ್ಲಿ ಅಲ್ಪ ಪ್ರಮಾಣದ ಪಾಲುದಾರಿಕೆ ಹೊಂದಿರುವ ನಮ್ಮ ಹಕ್ಕುಗಳನ್ನು ಮತ್ತು ನಿರ್ದೇಶಕ ಮಂಡಳಿಯಲ್ಲಿ ಒಂದು ಸ್ಥಾನ ಪಡೆಯಲು ಸಾಧ್ಯವಿರುವ ಪ್ರಯತ್ನಗಳನ್ನೆಲ್ಲ ಮುಂದುವರೆಸುವೆ’ ಎಂದು ತಿಳಿಸಿದ್ದಾರೆ.

ಸೈರಸ್‌ ಮಿಸ್ತ್ರಿ ಅವರನ್ನು ಮರು ನೇಮಕ ಮಾಡಬೇಕೆಂಬ ‘ಎನ್‌ಸಿಎಲ್‌ಎಟಿ’ ಆದೇಶ ರದ್ದುಪಡಿಸಬೇಕೆಂಬ ಟಾಟಾ ಸನ್ಸ್‌ನ ಅರ್ಜಿಯು ಈ ವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಅದಕ್ಕೂ ಮುಂಚೆಯೇ ಸೈರಸ್‌ ಅವರ ಈ ಹೇಳಿಕೆ ಹೊರ ಬಿದ್ದಿದೆ.

‘ನನ್ನ ಮರುನೇಮಕಾತಿ ಸಂಬಂಧ ನಡೆಯುತ್ತಿರುವ ಅಪಪ್ರಚಾರ ತಡೆಯುವ ಉದ್ದೇಶಕ್ಕೆ ಈ ಸ್ಪಷ್ಟನೆ ನೀಡಿದ್ದೇನೆ’ ಎಂದೂ ಅವರು ತಿಳಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.