ADVERTISEMENT

ಸ್ವಿಗ್ಗಿ, ಜೊಮಾಟೊ ವಿರುದ್ಧ ಸಿಸಿಐಗೆ ಮೊರೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 15:41 IST
Last Updated 23 ಜನವರಿ 2025, 15:41 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸ್ವಿಗ್ಗಿ ಮತ್ತು ಜೊಮಾಟೊ ಕಂಪನಿಯು ಖಾಸಗಿ ಲೇಬಲ್‌ ಬಳಕೆ ಮೂಲಕ ನ್ಯಾಯಸಮ್ಮತವಲ್ಲದ ವ್ಯಾಪಾರದಲ್ಲಿ ತೊಡಗಿವೆ ಎಂದು ಭಾರತೀಯ ರಾಷ್ಟ್ರೀಯ ರೆಸ್ಟೊರೆಂಟ್‌ ಸಂಘ (ಎನ್‌ಆರ್‌ಎಐ) ಆರೋಪಿಸಿದೆ. ಈ ಕುರಿತು ಭಾರತೀಯ ಸ್ಪರ್ಧಾತ್ಮಕ ಆಯೋಗಕ್ಕೆ (ಸಿಸಿಐ) ದೂರು ಸಲ್ಲಿಸಲು ಮುಂದಾಗಿದೆ.

ಆನ್‌ಲೈನ್‌ನಲ್ಲಿ ಆಹಾರ ವಿತರಿಸುವ ಈ ಕಂಪನಿಗಳು ತಮ್ಮ ಪಾಲುದಾರ ರೆಸ್ಟೊರೆ‌ಂಟ್‌ಗಳಿಂದ ದತ್ತಾಂಶ ಸಂಗ್ರಹಿಸುತ್ತವೆ. ನಮ್ಮ ಗ್ರಾಹಕರು ಯಾರೆಂಬುದು ಅವುಗಳಿಗೆ ಸ್ಪಷ್ಟವಾದ ಅರಿವಿದೆ. ಆದರೆ, ಈ ಮಾಹಿತಿ ಹಂಚಿಕೊಳ್ಳಲು ನಿರಾಕರಿಸುತ್ತಿವೆ. ಇದೇ ರೀತಿಯ ಉತ್ಪನ್ನಗಳನ್ನು ತಯಾರಿಸಿ ಖಾಸಗಿ ಲೇಬಲ್‌ ಅಂಟಿಸುವ ಮೂಲಕ ಮಾರಾಟ ಮಾಡುವ ಸಾಧ್ಯತೆಯಿದೆ. ಇದರಿಂದ ರೆಸ್ಟೊರೆಂಟ್‌ ವಲಯವು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಹೇಳಿದ್ದಾರೆ ಎಂದು ಸಂಘದ ಅಧ್ಯಕ್ಷ ಸಾಗರ್ ದರಿಯಾನಿ ಹೇಳಿದ್ದಾರೆ.

ಹತ್ತು ನಿಮಿಷದಲ್ಲಿ ಆಹಾರ ಪೂರೈಸುವುದಕ್ಕೆ ಸಂಬಂಧಿಸಿದಂತೆ ಸ್ವಿಗ್ಗಿಯಿಂದ ‘ಸ್ನಾಕ್’ ಹೆಸರಿನ ಆ್ಯಪ್‌ ಹಾಗೂ ಬ್ಲಿಂಕಿಟ್‌ನಿಂದ ಬಿಸ್ಟ್ರೊ ಆ್ಯಪ್‌ ರೂಪಿಸಲಾಗಿದೆ. ಆ ಮೂಲಕ ಈ ಹಿಂದೆ ನೀಡಿದ್ದ ಭರವಸೆಗಳನ್ನು ಮೂಲೆಗೆ ಸರಿಸಿವೆ ಎಂದು ದೂರಿದ್ದಾರೆ. 

ADVERTISEMENT

ಈಗಾಗಲೇ, ಹಲವು ರೆಸ್ಟೋರೆಂಟ್‌ಗಳು ಬಾಗಿಲು ಮುಚ್ಚಿವೆ. ಕಾರ್ಮಿಕರು ಕೆಲಸವಿಲ್ಲದೆ ಬೀದಿಪಾಲಾಗಿದ್ದಾರೆ ಎಂದು ಹೇಳಿದ್ದಾರೆ.

ಡಿಜಿಟಲ್‌ ವ್ಯಾಪಾರಕ್ಕಾಗಿನ ಮುಕ್ತ ವ್ಯವಸ್ಥೆಯನ್ನು (ಒಎನ್‌ಡಿಸಿ) ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದೆ. ಇದರಡಿ ರೆಸ್ಟೊರೆಂಟ್‌ಗಳು ತಯಾರಿಸುವ ಆಹಾರವನ್ನು ನೇರವಾಗಿ ಆರ್ಡರ್‌ ಮಾಡಬಹುದಾಗಿದೆ. ಈ ವ್ಯವಸ್ಥೆಯು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡಿದೆ. ದೇಶದಾದ್ಯಂತ ಇದರ ಜಾರಿಗೊಳಿಸುವ ಬಗ್ಗೆ ಸಂಘವು ಗಮನಹರಿಸುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.