ಮುಂಬೈ: ವಾಹನ ಸವಾರರು ಪರಿಸರ ಸ್ನೇಹಿ ಇಂಧನ ಆಯ್ಕೆ ಮಾಡಿಕೊಳ್ಳುತ್ತಿರುವುದರ ಹೊರತಾಗಿಯೂ 2035ರ ಹೊತ್ತಿಗೆ ಪೆಟ್ರೋಲ್‌ಗೆ ಹಾಗೂ 2041ರ ಹೊತ್ತಿಗೆ ಡೀಸೆಲ್‌ಗೆ ಬೇಡಿಕೆ ಹೆಚ್ಚಲಿದೆ ಎಂದು ರಿಲಯನ್ಸ್ ಕೈಗಾರಿಕೆಯ ವ್ಯವಹಾರ ಅಭಿವೃದ್ಧಿ ವಿಭಾಗದ ಅಧ್ಯಕ್ಷ ಹರೀಶ್ ಮೆಹ್ತಾ ಗುರುವಾರ ತಿಳಿಸಿದ್ದಾರೆ.
ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಘಟಕ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂಧನ ಬೇಡಿಕೆಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಭಾರತವು, ಇಂಗಾಲದ ಪ್ರಮಾಣವನ್ನು 2070ರ ಹೊತ್ತಿಗೆ ಶೂನ್ಯಕ್ಕೆ ತರುವ ಗುರಿ ಹೊಂದಿದೆ. ಆದರೆ ಸದ್ಯದ ಬೇಡಿಕೆಯಂತೆ ಚೀನಾವನ್ನು ಭಾರತ ಹಿಂದಿಕ್ಕಿದೆ. ಮುಂದಿನ ಒಂದು ದಶಕದವರೆಗೂ ಇಂಧನ ಬೇಡಿಕೆ ಏರುಗತಿಯಲ್ಲೇ ಇರಲಿದೆ ಎಂದಿದ್ದಾರೆ.
‘ವಾಹನ ಕ್ಷೇತ್ರದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಹೊರತುಪಡಿಸಿದರೆ ದ್ರವರೂಪದ ನೈಸರ್ಗಿಕ ಅನಿಲ, ಸಿಎನ್‌ಜಿ ಮತ್ತು ಜೈವಿಕ ಅನಿಲಕ್ಕೂ ಇಲ್ಲಿ ಬೇಡಿಕೆ ಹೆಚ್ಚು. ಇದರೊಂದಿಗೆ ಬ್ಯಾಟರಿ ಚಾಲಿತ ವಾಹನಗಳಿಗೂ ಬೇಡಿಕೆ ಹೆಚ್ಚಲಿದೆ’ ಎಂದು ಹೇಳಿದ್ದಾರೆ.
‘ಭಾರತದಲ್ಲಿ ತೈಲ ಮತ್ತು ಅನಿಲ ಬಳಕೆಯ ಪ್ರಮಾಣ ವಾರ್ಷಿಕ ಶೇ 3ರಿಂದ 4ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ‘ ಎಂದು ಒಎನ್‌ಜಿಸಿ ಅಧ್ಯಕ್ಷ ಎ.ಕೆ. ಸಿಂಗ್ ಹೇಳಿದ್ದಾರೆ.
ಇಂಡಿಯನ್ ಆಯಿಲ್ ನಿಗಮದ ಅಧ್ಯಕ್ಷ ಎ.ಎಸ್.ಸಹನೆ ಮಾತನಾಡಿ, ‘ಭಾರತದಲ್ಲಿ ಇಂಧನ ಬೇಡಿಕೆ ಗಣನೀಯವಾಗಿ ಹೆಚ್ಚಳವಾಗಲಿದೆ. ಮುಂದಿನ ಎರಡು ವರ್ಷಗಳಲ್ಲಿ ತೈಲ ಸಂಸ್ಕರಣಾ ಘಟಕಗಳ ಸಾಮರ್ಥ್ಯ ಶೇ 20ರಷ್ಟು ಹೆಚ್ಚಲಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.