ನವದೆಹಲಿ: ‘ಸರ್ಕಾರವು 2024–25ನೇ ಆರ್ಥಿಕ ಸಾಲಿಗೆ ₹11.11 ಲಕ್ಷ ಕೋಟಿ ಬಂಡವಾಳ ವೆಚ್ಚ ನಿಗದಿಪಡಿಸಿದ್ದು, ಈ ಗುರಿ ಸಾಧನೆ ಮಾಡಲಾಗುವುದು’ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಪಂಕಜ್ ಚೌಧರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ಐದು ವರ್ಷಗಳಿಂದ ಸರ್ಕಾರವು ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಬಂಡವಾಳ ವೆಚ್ಚವನ್ನು ಏರಿಕೆ ಮಾಡಿದೆ’ ಎಂದರು.
ಎಲ್ಲಾ ಸಚಿವರು ಆರ್ಥಿಕ ವರ್ಷದ ಅಂತ್ಯದೊಳಗೆ ತಮ್ಮ ಸಚಿವಾಲಯಗಳಿಗೆ ನಿಗದಿಪಡಿಸಿರುವ ಅನುದಾನವನ್ನು ಖರ್ಚು ಮಾಡಬೇಕು ಎಂದು ಸೂಚಿಸಿದರು.
2021–22ರಲ್ಲಿ ₹5 ಲಕ್ಷ ಕೋಟಿ ಇದ್ದ ಬಂಡವಾಳ ವೆಚ್ಚವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ದ್ವಿಗುಣಗೊಂಡಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶದಾದ್ಯಂತ ರಸ್ತೆ, ವಿಮಾನ, ಸಾರಿಗೆ ಸಂಪರ್ಕದ ಬಲವರ್ಧನೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.
‘2047ರ ವೇಳೆಗೆ ಸರ್ಕಾರವು ‘ವಿಕಸಿತ ಭಾರತ’ದ ಗುರಿ ಹೊಂದಿದೆ. ಇದಕ್ಕೆ ಪೂರಕವಾಗಿ ಬಜೆಟ್‌ನಲ್ಲಿ ಅನುದಾನವನ್ನು ಮೀಸಲಿಡುತ್ತಿದೆ. 2025–26ನೇ ಸಾಲಿನ ಬಜೆಟ್‌ನಲ್ಲಿಯೂ ಇದಕ್ಕೆ ಹೆಚ್ಚಿನ ಅನುದಾನವನ್ನು ಮೀಸಲಿಡಲಾಗುವುದು’ ಎಂದು ವಿವರಿಸಿದರು.
2047ಕ್ಕೆ ಭಾರತವು ಸ್ವಾತಂತ್ರ್ಯಗೊಂಡು ನೂರು ವರ್ಷಗಳು ಪೂರ್ಣಗೊಳ್ಳಲಿವೆ. ಹಾಗಾಗಿ ನೀತಿ ಆಯೋಗವು ವಿಕಸಿತ ಭಾರತ@2047 ಗುರಿ ಹೊಂದಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಗೊಳಿಸುವುದು ಇದರ ಹಿಂದಿರುವ ಗುರಿಯಾಗಿದೆ. ಈ ವೇಳೆಗೆ ದೇಶದ ವಾರ್ಷಿಕ ತಲಾ ಆದಾಯವನ್ನು 18 ಸಾವಿರ ಡಾಲರ್‌ಗೆ ಹೆಚ್ಚಿಸುವ ಮೂಲಕ ಭಾರತದ ಆರ್ಥಿಕತೆಯ ಗಾತ್ರವನ್ನು 30 ಟ್ರಿಲಿಯನ್ ಅಮೆರಿಕನ್ ಡಾಲರ್‌ಗೆ (₹2540 ಲಕ್ಷ ಕೋಟಿ) ತಲುಪುವ ಗುರಿ ಹೊಂದಲಾಗಿದೆ. ಪ್ರಸ್ತುತ ಭಾರತದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಗಾತ್ರವು ₹284 ಲಕ್ಷ ಕೋಟಿ (3.36 ಟ್ರಿಲಿಯನ್ ಅಮೆರಿಕನ್ ಡಾಲರ್) ಹಾಗೂ ತಲಾ ಆದಾಯವು ವಾರ್ಷಿಕ 2392 ಡಾಲರ್ ಇದೆ. ವಿಕಸಿತ ಭಾರತದ ಗುರಿ ಸಾಧಿಸಲು ಜಿಡಿಪಿ ಗಾತ್ರದಲ್ಲಿ ಒಂಬತ್ತು ಪಟ್ಟು ಹಾಗೂ ತಲಾ ಆದಾಯದಲ್ಲಿ ಎಂಟು ಪಟ್ಟು ಏರಿಕೆಯಾಗಬೇಕಿದೆ ಎಂದು ನೀತಿ ಆಯೋಗ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.