ADVERTISEMENT

ಏಪ್ರಿಲ್‌ನಿಂದ ಅಗ್ಗದ ಸರಕು, ಸೇವಾ ತೆರಿಗೆ: ಗೃಹ ನಿರ್ಮಾಣ ರಂಗದ ಅಸ್ಪಷ್ಟತೆ ದೂರ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 20:27 IST
Last Updated 21 ಮಾರ್ಚ್ 2019, 20:27 IST
   

ಬೆಂಗಳೂರು: ಹೊಸ ಹಣಕಾಸು ವರ್ಷದಿಂದ (ಏಪ್ರಿಲ್‌ 1ರಿಂದ) ರಿಯಲ್‌ ಎಸ್ಟೇಟ್‌ ವಲಯದಲ್ಲಿ ಅಗ್ಗದ ಜಿಎಸ್‌ಟಿ ದರಗಳು ಜಾರಿಗೆ ಬರಲಿದ್ದು, ವಸತಿ ನಿರ್ಮಾಣ ರಂಗದಲ್ಲಿ ಇದುವರೆಗೆ ಇದ್ದ ಅಸ್ಪಷ್ಟತೆಗಳೆಲ್ಲ ದೂರವಾಗಲಿವೆ.

ಮಾರ್ಚ್‌ ಅಂತ್ಯದ ವೇಳೆಗೆ ಪೂರ್ಣಗೊಂಡಿರದ ಗೃಹ ನಿರ್ಮಾಣ ಯೋಜನೆಗಳಲ್ಲಿ ಹಳೆಯ ವ್ಯವಸ್ಥೆಯಾದ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ಅಥವಾ ‘ಐಟಿಸಿ’ ಇಲ್ಲದ ಶೇ 5 ಮತ್ತು ಶೇ 1ರಷ್ಟು ಜಿಎಸ್‌ಟಿಯ ಹೊಸವ್ಯವಸ್ಥೆ ಆಯ್ಕೆ ಮಾಡಿಕೊಳ್ಳಲು ರಿಯಲ್‌ ಎಸ್ಟೇಟ್‌ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ‘ಐಟಿಸಿ’ಯ ಪ್ರಯೋಜನವನ್ನು ಖರೀದಿದಾರರಿಗೆ ವರ್ಗಾಯಿಸುವ ಮತ್ತು ಖರೀದಿದಾರರು ಪಾವತಿಸುವ ತೆರಿಗೆ ಬಗ್ಗೆ ಸದ್ಯಕ್ಕೆ ಸ್ಪಷ್ಟತೆ ಇದ್ದಿರಲಿಲ್ಲ. ಇನ್ನು ಮುಂದೆ ಈ ಗೊಂದಲ ದೂರವಾಗಲಿದೆ. ಬೆಲೆ ವಿಷಯದಲ್ಲಿ ಹೆಚ್ಚಿನ ಸ್ಥಿರತೆ ಇರಬೇಕು ಎನ್ನುವುದು ಮನೆ ಖರೀದಿಸುವವರ ಬಹುದಿನಗಳ ನಿರೀಕ್ಷೆಯಾಗಿತ್ತು. ಅದು ಈಗ ಈಡೇರಲಿದೆ. ವಸತಿ ಯೋಜನೆಗಳ ಬೆಲೆ ಬಗ್ಗೆ ಇನ್ನು ಮುಂದೆ ಯಾವುದೇ ಬಗೆಯ ಅಸ್ಪಷ್ಟತೆ ಇರುವುದಿಲ್ಲ. ಮನೆ ಖರೀದಿಸಲು ಬಯಸುವವರು ವಸತಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇನ್ನು ಮುಂದೆ ಹೆಚ್ಚು ಆಸಕ್ತಿ ತೋರಿಸಬಹುದು ಎಂದು ರಿಯಲ್‌ ಎಸ್ಟೇಟ್‌ ಮೂಲಗಳು ಅಂದಾಜಿಸಿವೆ.

ADVERTISEMENT

‘ಐಟಿಸಿ’ ದೊರೆಯದ ಸಂದರ್ಭದಲ್ಲಿ ನಿರ್ಮಾಣ ಸಂಸ್ಥೆಗಳು ಬೆಲೆ ಹೆಚ್ಚಳದ ಹೊರೆಯನ್ನು ಖರೀದಿದಾರರಿಗೆ ವರ್ಗಾಯಿಸದಿದ್ದರೆ, ಜಿಎಸ್‌ಟಿ ದರ ಕಡಿತದಿಂದಾಗಿ ಅಗ್ಗದ ಮನೆ ಖರೀದಿದಾರರ ಪಾಲಿಗೆ ತಿಂಗಳ ಉಳಿತಾಯದ ಮೊತ್ತವು ₹ 800 ರಿಂದ ₹ 1,000ವರೆಗೆ ಇರಲಿದೆ. ಇತರ ಮನೆಗಳ ವಿಷಯದಲ್ಲಿ ಈ ಉಳಿತಾಯವು ₹ 2,750 ರಿಂದ ₹ 3,000ವರೆಗೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.