ADVERTISEMENT

ಭದ್ರತಾ ಠೇವಣಿಗೆ ಮಿತಿ: ಹೊಸ ನಿಯಮದಲ್ಲಿ ಬಾಡಿಗೆದಾರರಿಗೆ ಹಲವು ಅನುಕೂಲಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಡಿಸೆಂಬರ್ 2025, 10:11 IST
Last Updated 4 ಡಿಸೆಂಬರ್ 2025, 10:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಮುಂದಿನ ವರ್ಷದಿಂದ ಮನೆ ಬಾಡಿಗೆ ನಿಯಮಗಳು ಬದಲಾಗಲಿದ್ದು, ಕೇಂದ್ರ ಸರ್ಕಾರವು ಬಾಡಿಗೆ ನಿಮಯಗಳು–2025ನ್ನು ಜಾರಿಗೆ ತರಲು ಮುಂದಾಗಿದೆ. ಬಾಡಿಗೆ ಒಪ್ಪಂದದಲ್ಲಿ ಹೆಚ್ಚು ಸ್ಪಷ್ಟತೆ, ತಕರಾರುಗಳನ್ನು ಕಡಿಮೆ ಮಾಡುವುದು ಮತ್ತು ಬಾಡಿಗೆದಾರ ಹಾಗೂ ಮಾಲೀಕರಿಗೆ ರಕ್ಷಣೆ ನೀಡುವುದು ಈ ಹೊಸ ಕಾನೂನಿನ ಉದ್ದೇಶವಾಗಿದೆ.

ADVERTISEMENT

ಉದ್ದೇಶಿತ ಹೊಸ ನಿಯಮದಡಿ ಪ್ರತಿಯೊಂದು ಮನೆ ಬಾಡಿಗೆ ಕರಾರನ್ನು ಆನ್‌ಲೈನ್ ಮೂಲಕವೇ ಮಾಡಬೇಕು. ಮನೆ ಬಾಡಿಗೆ ಪಡೆದ 60 ದಿನದೊಳಗೆ ಈ ಪ್ರಕ್ರಿಯೆ ಮುಗಿಸಬೇಕು.

ಭದ್ರತಾ ಠೇವಣಿಗೆ ಮಿತಿ, ಬಾಡಿಗೆ ಹೆಚ್ಚಳಕ್ಕೆ ನಿಗದಿತ ಸಮಯ ಮಿತಿ, ಮನೆ ಖಾಲಿ ಮಾಡಲು ಅಥವಾ ಪರಿಶೀಲನೆ ಮಾಡಲು ನಿಯಮ ಮುಂತಾದವುಗಳು ಉದ್ದೇಶಿತ ಕಾನೂನಿನಲ್ಲಿ ಇದೆ ಎನ್ನಲಾಗಿದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಡಿಜಿಟಲ್ ರೂಪದಲ್ಲಿಯೇ ಮಾಡಲು, ವ್ಯವಸ್ಥೆಗಳನ್ನು ಸಜ್ಜುಗೊಳಿಸಬೇಕು ಎಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಆನ್‌ಲೈನ್ ನೋಂದಣಿ ಕಡ್ಡಾಯ ಮಾಡುವ ಮೂಲಕ, ನಕಲಿ ಕರಾರು, ಅನಧೀಕೃತವಾಗಿ ಮನೆ ಖಾಲಿ ಮಾಡಿಸುವುದು ಹಾಗೂ ಅಸ್ಪಷ್ಟ ವಾಯಿದೆಯನ್ನು ತಡೆಯುವುದು ಸರ್ಕಾರದ ಉದ್ದೇಶವಾಗಿದೆ.

ನಿಗದಿತ ಸಮಯಕ್ಕೆ ಕರಾರು ಮಾಡಿಕೊಳ್ಳದಿದ್ದರೆ ₹ 5000ದಿಂದ ಆರಂಭವಾಗಿ ದಂಡ ವಿಧಿಸುವ ಪ್ರಸ್ತಾಪ ಇದೆ. ದಂಡದ ಮೊತ್ತ ನಿಗದಿ ಪಡಿಸುವ ಅಧಿಕಾರ ರಾಜ್ಯ ಸರ್ಕಾರಗಳದ್ದು.

ಕನಿಷ್ಠ ಭದ್ರತಾ ಠೇವಣಿ

ಉದ್ದೇಶಿತ ಹೊಸ ಕಾನೂನಿನಲ್ಲಿ ಭದ್ರತಾ ಠೇವಣಿಗೆ ಮಿತಿ ಇರುವುದು ಬಾಡಿಗೆದಾರರಿಗೆ ದೊಡ್ಡ ಅನುಕೂಲವಾಗಲಿದೆ. ಮನೆಗಳಿಗೆ ಗರಿಷ್ಠ ಎರಡು ತಿಂಗಳ ಬಾಡಿಗೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಗರಿಷ್ಠ 6 ತಿಂಗಳ ಮಿತಿ ನೀಡಲಾಗಿದೆ.

ಬೆಂಗಳೂರಿನಂತಹ ನಗರದಲ್ಲಿ ಕನಿಷ್ಠ 10 ತಿಂಗಳ ಬಾಡಿಗೆ ಹಣ ಅಥವಾ ಲಕ್ಷಗಟ್ಟಲೆ ಹಣವನ್ನು ಭದ್ರತಾ ಠೇವಣಿಯಾಗಿ ಪಡೆದುಕೊಳ್ಳುವ ಪರಿಪಾಠ ಇದೆ. ಹೊಸ ನಿಯಮ ಜಾರಿಯಾದ ಬಳಿಕ ಉದ್ಯೋಗ, ಶಿಕ್ಷಣಕ್ಕೆಂದು ಬರುವ ಬಡ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ.

ಬಾಡಿಗೆ ಏರಿಕೆ

ಪ್ರಸ್ತಾವಿತ ನಿಯಮದಲ್ಲಿ ಬಾಡಿಗೆ ಯಾವಾಗ ಹೆಚ್ಚು ಮಾಡಬೇಕು ಎನ್ನುವುದರ ಉಲ್ಲೇಖ ಇದೆ. 12 ತಿಂಗಳ ಬಳಿಕವಷ್ಟೇ ಮನೆ ಮಾಲೀಕರು ಬಾಡಿಗೆ ಹೆಚ್ಚಳ ಮಾಡಬಹುದು. ಬಾಡಿಗೆ ಹೆಚ್ಚು ಮಾಡುವುದಕ್ಕಿಂತ ಕನಿಷ್ಠ 90 ದಿನ ಮುಂಚಿತವಾಗಿ ತಿಳಿಸಬೇಕು. ಇದು ಬಾಡಿಗೆ ಏಕಾಏಕಿ ಏರಿಕೆ ಮಾಡುವುದನ್ನು ತಡೆಯುವುದು ಮಾತ್ರವಲ್ಲದೆ, ಹಣಕಾಸಿನ ಲೆಕ್ಕಾಚಾರ ಹಾಕಿ ಆ ಮನೆಯಲ್ಲಿ ಮುಂದುವರಿವುದರ ಬಗ್ಗೆ ನಿರ್ಧಾರ ಮಾಡಲು ಬಾಡಿಗೆದಾರನಿಗೆ ಸಮಯಾವಕಾಶವನ್ನೂ ಕಲ್ಪಿಸುತ್ತದೆ.

ಯಾವುದೇ ಕಾನೂನು ಪ್ರಕ್ರಿಯೆ ಇಲ್ಲದೆ ಬಾಡಿಗೆದಾರನನ್ನು ಖಾಲಿ ಮಾಡಿಸುವ ಹಾಗಿಲ್ಲ. ಬಾಡಿಗೆ ನ್ಯಾಯಾಧೀಕರಣದಿಂದ ‘ಖಾಲಿ ಮಾಡಿಸುವ ಆದೇಶ’ ತಂದು ಮನೆ ಖಾಲಿ ಮಾಡಲು ಹೇಳಬಹುದು. ಮನೆಯ ಬೀಗ ಬದಲಾಯಿಸುವುದು, ನೀರು ಅಥವಾ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಅಥವಾ ಬಾಡಿಗೆದಾರನಿಗೆ ಬೆದರಿಸುವುದು ಇನ್ನು ಮುಂದೆ ಶಿಕ್ಷಾರ್ಹವಾಗಲಿದೆ.

ಬಾಡಿಗೆದಾರರ ಖಾಸಗಿತನವನ್ನೂ ಗೌರವಿಸುವ ಕಾನೂನು ಹೊಸ ನಿಯಮದಲ್ಲಿ ಇರಲಿದ್ದು, ಆಸ್ತಿಯನ್ನು ಪರಿಶೀಲಿಸಲು ಅಥವಾ ರಿಪೇರಿ ಕೆಲಸಕ್ಕೆ ಬರುವ ಕನಿಷ್ಠ 24 ಗಂಟೆ ಮುನ್ನ ಲಿಖಿತ ನೋಟಿಸ್ ನೀಡಬೇಕು.

ಯಾವುದಾದರೂ ಅಗತ್ಯ ರಿಪೇರಿ ಬೇಕಿದ್ದಲ್ಲಿ, ಮನೆ ಮಾಲೀಕರ ಗಮನಕ್ಕೆ ಬಾಡಿಗೆದಾರ ತರಬೇಕು. 30 ದಿನಗಳ ಒಳಗಾಗಿ ಮಾಲೀಕ ಪ್ರತಿಕ್ರಿಯೆ ನೀಡದಿದ್ದರೆ, ಖುದ್ದು ಬಾಡಿಗೆದಾರನೇ ಅವುಗಳನ್ನು ರಿಪೇರಿ ಮಾಡಿಸಿ ಬಾಡಿಗೆಯಿಂದ ಕಡಿತ ಮಾಡಬಹುದು. ಆದರೆ ಅದಕ್ಕೆ ಬೇಕಾದ ದಾಖಲೆಗಳನ್ನು ನೀಡಬೇಕು.

ಬಾಡಿಗೆದಾರ ಪೊಲೀಸ್ ಪರಿಶೀಲನೆಗೊಳಪಡುವುದು ಕೂಡ ಹೊಸ ನಿಯಮದಲ್ಲಿದೆ. ಸುರಕ್ಷಿತ ಬಾಡಿಗೆ ವ್ಯವಹಾರಕ್ಕೆ ಇದು ಸಹಕಾರಿಯಾಗಲಿದೆ.

ಭದ್ರತಾ ಠೇವಣಿ, ಬಾಡಿಗೆ, ರಿಪೇರಿ, ಬಾಡಿಗೆ ಹೆಚ್ಚಳ ಬಗ್ಗೆ ಹೊಸ ಕಾನೂನಿನಲ್ಲಿ ಸ್ಪಷ್ಟ ಉಲ್ಲೇಖ ಇರುವುದರಿಂದ ವಿವಿಧ ಕಾರಣಗಳಿಗಾಗಿ ಊರು ಬಿಟ್ಟು ತೆರಳುವ ಲಕ್ಷಾಂತರ ಜನರಿಗೆ ಇದು ಅನುಕೂಲವಾಗಲಿದೆ.

(ವಿವಿಧ ಮೂಲಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.