ADVERTISEMENT

ರೆಪೊ ದರದಲ್ಲಿ ಇಲ್ಲ ಬದಲಾವಣೆ; ಜಿಡಿಪಿ ಶೇ 7.8ರಷ್ಟು ನಿರೀಕ್ಷೆ: ಆರ್‌ಬಿಐ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2022, 5:33 IST
Last Updated 10 ಫೆಬ್ರುವರಿ 2022, 5:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರ (ಶೇ 4) ಮತ್ತು ರಿವರ್ಸ್‌ ರೆಪೊ ದರದಲ್ಲಿ (ಶೇ 3.35) ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಕೋವಿಡ್‌–19 ಸಾಂಕ್ರಾಮಿಕವು ಜಾಗತಿಕ ಆರ್ಥಿಕತೆಯನ್ನು ಮತ್ತೆ ಅಧೀನಕ್ಕೆ ತೆಗೆದುಕೊಂಡಿದೆ ಎಂದು ಗವರ್ನರ್‌ ಶಕ್ತಿಕಾಂತ ದಾಸ್‌ ಅಭಿಪ್ರಾಯ ಪಟ್ಟಿದ್ದಾರೆ.

2022–23ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆಯ ಬಳಿಕ ನಡೆದಿರುವ ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಮೊದಲ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾಂಕ್ರಾಮಿಕದ ನಡುವೆ ಜಗತ್ತು ಲಸಿಕೆ ಕಾರ್ಯಕ್ರಮ ಮತ್ತು ಬೂಸ್ಟರ್‌ ಡೋಸ್‌ಗಳ ಕಡೆಗೆ ಗಮನ ಹರಿಸುತ್ತಿದೆ ಎಂದರು.

2022–23ನೇ ಸಾಲಿನಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ದರವು ಶೇಕಡ 7.8ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ.

ADVERTISEMENT

2021–22ನೇ ಸಾಲಿನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಶೇಕಡ 5.3 ಹಾಗೂ 2022–23ರಲ್ಲಿ ಶೇಕಡ 4.5ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.

ಆಟೊಮೊಬೈಲ್‌ ವಲಯ, ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಕುಸಿತ ಸೇರಿದಂತೆ ಕೆಲವು ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳ ಮುನ್ನಡೆಗೆ ತೊಡಕಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯ ಬಗ್ಗೆ ನಿಗಾವಹಿಸಬೇಕಿದೆ ಎಂದು ಹೇಳಿದರು.

ಗವರ್ನರ್‌ ಶಕ್ತಿಕಾಂತ ದಾಸ್‌ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ಗುರುವಾರ ಪ್ರಕಟಣೆ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.