ADVERTISEMENT

ಬೇಡಿಕೆ ಹೆಚ್ಚಳ, ಹೂಡಿಕೆ ಇದ್ದರೆ ಬೆಳವಣಿಗೆ: ಆರ್‌ಬಿಐ

ಪಿಟಿಐ
Published 27 ಮೇ 2021, 15:19 IST
Last Updated 27 ಮೇ 2021, 15:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸಾಂಕ್ರಾಮಿಕದ ಅಲೆಯು ತಗ್ಗಿದ ನಂತರದಲ್ಲಿ ಆರ್ಥಿಕ ಬೆಳವಣಿಗೆ ಸುಸ್ಥಿರ ಆಗಬೇಕು ಎಂದಾದರೆ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾಗಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಹೇಳಿದೆ.

‘2020–21ನೆಯ ಹಣಕಾಸು ವರ್ಷವು ಆರ್ಥಿಕತೆಗೆ ಗಾಯ ಮಾಡಿದೆ. ಕೋವಿಡ್‌ನ ಎರಡನೆಯ ಅಲೆಯ ಕಾರಣದಿಂದಾಗಿ, ಹಾಲಿ ಆರ್ಥಿಕ ವರ್ಷದಲ್ಲಿ (2021–22) ದೇಶದ ಜಿಡಿಪಿ ಎಷ್ಟು ಬೆಳವಣಿಗೆ ಸಾಧಿಸಬಹುದು ಎಂಬ ಅಂದಾಜನ್ನು ಪರಿಷ್ಕರಿಸಲಾಗುತ್ತಿದೆ. ಬೆಳವಣಿಗೆಯು ಶೇಕಡ 10.5ರಷ್ಟು ಇರಬಹುದು ಎಂಬುದು ನಮ್ಮ ಅಂದಾಜು. ಇತರರು ಕೂಡ ಈಗ ಈ ಅಂದಾಜಿಗೆ ಸಹಮತ ಸೂಚಿಸುವಂತೆ ಕಾಣುತ್ತಿದೆ’ ಎಂದು ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.

ಬಿಕ್ಕಟ್ಟಿನ ನಂತರದ ಸಂದರ್ಭದಲ್ಲಿ ಆರ್ಥಿಕ ಪುನಶ್ಚೇತನವು ಸಾಮಾನ್ಯವಾಗಿ ಹೂಡಿಕೆಗಿಂತಲೂ ಮಿಗಿಲಾಗಿ ಬೇಡಿಕೆ ಹೆಚ್ಚಳದ ಮೂಲಕ ಆಗುತ್ತದೆ. ಆದರೆ, ಹೂಡಿಕೆ ಹೆಚ್ಚಳದ ಮೂಲಕ ಆಗುವ ಆರ್ಥಿಕ ಪುನಶ್ಚೇತನವು ಹೆಚ್ಚು ಸುಸ್ಥಿರವಾಗಿರುತ್ತದೆ, ಬೇಡಿಕೆಯನ್ನು ಹೆಚ್ಚಿಸುತ್ತದೆ ಹಾಗೂ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

‘ಸಾಲದ ಮೇಲೆ ಕಣ್ಣಿಡಿ’: ಮರುಪಾವತಿ ಆಗುತ್ತಿಲ್ಲದ ಸಾಲದ ಮೇಲೆ ಒಂದು ಕಣ್ಣು ಇಡುವಂತೆ, ಎನ್‌ಪಿಎ ಆಗಬಹುದಾದ ಸಾಲಗಳಿಗಾಗಿ ಅಗತ್ಯ ಪ್ರಮಾಣದಲ್ಲಿ ಬಂಡವಾಳ ಮೀಸಲಿಡುವಂತೆ ಆರ್‌ಬಿಐ, ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ಆದರೆ, ಬ್ಯಾಂಕ್‌ಗಳ ಬಳಿ ಹೆಚ್ಚು ಬಂಡವಾಳ ಇರುವುದರಿಂದ, ಸಾಲದ ವಸೂಲಿ ಸುಧಾರಿಸುತ್ತಿರುವುದರಿಂದ ಹಾಗೂ ಬ್ಯಾಂಕ್‌ಗಳು ಲಾಭದ ಹಳಿಗೆ ಮರಳಿರುವುದರಿಂದ ಹಣಕಾಸಿನ ಒತ್ತಡಗಳನ್ನು ಉತ್ತಮವಾಗಿ ನಿಭಾಯಿಸುವ ಸ್ಥಿತಿಯಲ್ಲಿ ಅವು ಇವೆ ಎಂದು ಆರ್‌ಬಿಐ ವಿಶ್ವಾಸ ವ್ಯಕ್ತಪಡಿಸಿದೆ.

ಹೆಚ್ಚಿದ ನೋಟು ಚಲಾವಣೆ: 2020–21ರಲ್ಲಿ ಬ್ಯಾಂಕ್‌ ನೋಟುಗಳ ಚಲಾವಣೆಯು ಸರಾಸರಿ ಪ್ರಮಾಣಕ್ಕಿಂತ ಜಾಸ್ತಿ ಆಗಿತ್ತು ಎಂಬ ಅಂಶವು ವರದಿಯಲ್ಲಿ ಇದೆ. ಸಾಂಕ್ರಾಮಿಕದ ಕಾರಣದಿಂದಾಗಿ ಜನ ಮುನ್ನೆಚ್ಚರಿಕೆಯಿಂದ ನಗದನ್ನು ತಮ್ಮ ಬಳಿ ಹೆಚ್ಚಿನ ಪ್ರಮಾಣದಲ್ಲಿ ಇರಿಸಿಕೊಳ್ಳುತ್ತಿದ್ದುದು ಇದಕ್ಕೆ ಕಾರಣ ಎಂದು ಅದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.