ADVERTISEMENT

ಅಕ್ಕಿ ತುಟ್ಟಿ: ಭಾರತ್‌ ಬ್ರ್ಯಾಂಡ್‌ ಹೆಸರಿನಡಿ ಮಾರಾಟಕ್ಕೆ ಕೇಂದ್ರ ನಿರ್ಧಾರ

ಭಾರತ್‌ ಬ್ರ್ಯಾಂಡ್‌ನಡಿ ಮಾರಾಟಕ್ಕೆ ನಿರ್ಧಾರ l ಇನ್ನೂ ನಿಗದಿಯಾಗದ ಬೆಲೆ

ಪಿಟಿಐ
Published 29 ಡಿಸೆಂಬರ್ 2023, 1:25 IST
Last Updated 29 ಡಿಸೆಂಬರ್ 2023, 1:25 IST
ಅಕ್ಕಿ (ಪ್ರಾತಿನಿಧಿಕ ಚಿತ್ರ)
ಅಕ್ಕಿ (ಪ್ರಾತಿನಿಧಿಕ ಚಿತ್ರ)   

ನವದೆಹಲಿ: ದೇಶದಲ್ಲಿ ಅಕ್ಕಿ ತುಟ್ಟಿಯಾಗುತ್ತಿರುವ ಬೆನ್ನಲ್ಲೇ ಭಾರತೀಯ ಆಹಾರ ನಿಗಮದ ದಾಸ್ತಾನಿನಲ್ಲಿರುವ ಅಕ್ಕಿಯನ್ನು ‘ಭಾರತ್‌ ಬ್ರ್ಯಾಂಡ್‌’ ಹೆಸರಿನಡಿ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ, ಒಂದು ಕೆ.ಜಿ ಅಕ್ಕಿಗೆ ಎಷ್ಟು ದರ ನಿಗದಿಪಡಿಸಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಕೇಂದ್ರ ಆಹಾರ ಸಚಿವಾಲಯ ಹೇಳಿದೆ.

ಅಕ್ಕಿಯ ವಾರ್ಷಿಕ ಹಣದುಬ್ಬರವು ಶೇ 13ರಷ್ಟಿದೆ. ಅಲ್ಲದೇ, ಲೋಕಸಭೆಯ  ಮುಂಬರುವ ಚುನಾವಣೆಯಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯೇ ಚರ್ಚಾ ವಿಷಯವಾಗುವ ಸಾಧ್ಯತೆಯಿದೆ. ಹಾಗಾಗಿ, ಚಿಲ್ಲರೆ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಅಕ್ಕಿ ಮಾರಾಟಕ್ಕೆ ಕೇಂದ್ರ ಮುಂದಾಗಿದೆ ಎಂದು ಹೇಳಲಾಗಿದೆ. 

ಈಗಾಗಲೇ, ಕೇಂದ್ರವು ಭಾರತ್‌ ಬ್ರ್ಯಾಂಡ್‌ ಹೆಸರಿನಡಿ ಗೋಧಿ ಹಿಟ್ಟು ಹಾಗೂ ಬೇಳೆಯನ್ನು ಮಾರಾಟ ಮಾಡುತ್ತಿದೆ. ನೋಡಲ್‌ ಏಜೆನ್ಸಿಗಳಾದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (ನಾಫೆಡ್) ಮತ್ತು ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳವು (ಎನ್‌ಸಿಸಿಎಫ್‌) ಭಾರತ್‌ ಬ್ರ್ಯಾಂಡ್‌ನ ಮಾರಾಟ ಮಳಿಗೆಗಳ ನಿರ್ವಹಣೆಯ ಹೊಣೆ ಹೊತ್ತಿವೆ.

ADVERTISEMENT

ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿಯ ಚಿಲ್ಲರೆ ಧಾರಣೆ ಹೆಚ್ಚುತ್ತಿದೆ. ಹಾಗಾಗಿ, ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ (ಒಎಂಎಸ್‌ಎಸ್‌) ಇ–ಟೆಂಡರ್‌ ಮೂಲಕ ಅಕ್ಕಿ ಮಾರಾಟಕ್ಕೆ ನಿಗಮವು ಮುಂದಾಗಿತ್ತು. ಆದರೆ, ಇದಕ್ಕೆ ನಿರೀಕ್ಷಿತಮಟ್ಟದಲ್ಲಿ ಖರೀದಿಯ ಉತ್ಸಾಹ ಕಂಡುಬರಲಿಲ್ಲ.

‘ಚಿಲ್ಲರೆ ದರದಡಿ ಭಾರತ್‌ ಬ್ರ್ಯಾಂಡ್‌ ಹೆಸರಿನಲ್ಲಿ ಅಕ್ಕಿ ಮಾರಾಟಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ’ ಎಂದು ಅಧಿಕಾರಿಒಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಒಎಂಎಸ್‌ಎಸ್‌ನಡಿ ನಿಗಮವು ಗುಣಮಟ್ಟದ ಒಂದು ಕೆ.ಜಿ ಅಕ್ಕಿಗೆ ₹29 ಕನಿಷ್ಠ ಬೆಲೆ ನಿಗದಿಪಡಿಸಿತ್ತು. ಭಾರತ್‌ ಅಕ್ಕಿಯನ್ನು ಇದೇ ದರದಲ್ಲಿ ಮಾರಾಟ ಮಾಡಬಹುದು ಅಥವಾ ಇದಕ್ಕಿಂತಲೂ ದರ ಇಳಿಕೆಯಾಗಬಹುದು. ಕೇಂದ್ರ ಆಹಾರ ಸಚಿವರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

3.04 ಲಕ್ಷ ಟನ್‌ ಮಾರಾಟಕ್ಕೆ ನಿರ್ಧಾರ

ಭಾರತೀಯ ಆಹಾರ ನಿಗಮವು ಪ್ರಸಕ್ತ ವರ್ಷದಲ್ಲಿ ಒಎಂಎಸ್‌ಎಸ್‌ನಡಿ 3.04 ಲಕ್ಷ ಟನ್‌ ಅಕ್ಕಿ ಮಾರಾಟ ಮಾಡಲಿದೆ. ಅಲ್ಲದೇ, ಈ ಯೋಜನೆಯಡಿ ನೋಡಲ್‌ ಏಜೆನ್ಸಿಯು 82.89 ಲಕ್ಷ ಟನ್‌ನಷ್ಟು ಗೋಧಿಯನ್ನು ಮಾರಾಟ ಮಾಡಿದೆ ಎಂದು ಕೇಂದ್ರ ಸರ್ಕಾರದ ಅಂಕಿ–ಅಂಶಗಳು ತಿಳಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.