ADVERTISEMENT

Dollar vs Rupee: 90.93ರ ಮಟ್ಟಕ್ಕೆ ರೂಪಾಯಿ ಮೌಲ್ಯ

ವ್ಯಾಪಾರ ಕೊರತೆಯು ಮೌಲ್ಯ ಇಳಿಕೆಗೆ ಕಾರಣ ಎಂದ ಕೇಂದ್ರ ಸರ್ಕಾರ

ಪಿಟಿಐ
Published 17 ಡಿಸೆಂಬರ್ 2025, 0:30 IST
Last Updated 17 ಡಿಸೆಂಬರ್ 2025, 0:30 IST
   

ಮುಂಬೈ: ರೂಪಾಯಿಯ ಮೌಲ್ಯವು ಮಂಗಳವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್‌ ಎದುರು 15 ಪೈಸೆಯಷ್ಟು ಕುಸಿದು ₹90.93 ಆಗಿದೆ.

ವ್ಯಾಪಾರ ಕೊರತೆ ಅಂತರ ಹೆಚ್ಚುತ್ತಿರುವುದು, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ವಿಚಾರವಾಗಿ ನಡೆದಿರುವ ಬೆಳವಣಿಗೆಗಳು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣಗಳು ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ತಿಳಿಸಿದೆ.

ಮಂಗಳವಾರದ ವಹಿವಾಟಿನ ನಡುವಿನಲ್ಲಿ ರೂಪಾಯಿಯು 36 ಪೈಸೆಯವರೆಗೆ ಕುಸಿದು, 91.14ರವರೆಗೆ ತಲುಪಿತ್ತು. ಆದರೆ ನಂತರ ತುಸು ಚೇತರಿಕೆ ಕಂಡುಕೊಂಡಿತು. ಕಳೆದ ಐದು ವಹಿವಾಟಿನ ದಿನಗಳಲ್ಲಿ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್‌ ಎದುರು ಶೇ 1ರಷ್ಟು ಮೌಲ್ಯ ಕಳೆದುಕೊಂಡಿದೆ.

ADVERTISEMENT

ಡಾಲರ್‌ ದುರ್ಬಲವಾಗಿದ್ದರೂ ಕಚ್ಚಾ ತೈಲದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಆಗಿದ್ದರೂ ರೂಪಾಯಿ ಮೌಲ್ಯ ಕುಸಿತ ತಡೆಯಲು ಆಗಲಿಲ್ಲ ಎಂದು ವರ್ತಕರು ತಿಳಿಸಿದ್ದಾರೆ.

ರೂಪಾಯಿ ಮೌಲ್ಯ ಇಳಿಕೆಯ ವಿಚಾರ ರಾಜ್ಯಸಭೆಯಲ್ಲಿ ಮಂಗಳವಾರ ಪ್ರಸ್ತಾಪ ಆಯಿತು. ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು, ‘ಈ ಹಣಕಾಸು ವರ್ಷದಲ್ಲಿ ರೂಪಾಯಿ ಮೌಲ್ಯದ ಮೇಲೆ ವ್ಯಾಪಾರ ಕೊರತೆ, ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಗಳು ಪ್ರಭಾವ ಬೀರಿವೆ’ ಎಂದು ತಿಳಿಸಿದರು.

‘ರೂಪಾಯಿ ಮೌಲ್ಯದ ಕುಸಿತವು ರಫ್ತು ವಲಯದ ಸ್ಪರ್ಧಾತ್ಮಕತೆಯನ್ನು ಹೆಚ್ಚು ಮಾಡುವ ಸಾಧ್ಯತೆ ಇದೆ. ಇದು ದೇಶದ ಅರ್ಥ ವ್ಯವಸ್ಥೆಯ ಮೇಲೆ ಪೂರಕ ಪರಿಣಾಮ ಉಂಟುಮಾಡುತ್ತದೆ. ಆದರೆ ಮೌಲ್ಯ ಕುಸಿತವು ಆಮದು ಮಾಡಿಕೊಂಡ ಸರಕುಗಳ ಬೆಲೆಯನ್ನು ಹೆಚ್ಚಿಸಬಹುದು. ರೂಪಾಯಿ ಮೌಲ್ಯ ಕುಸಿತದಿಂದಾಗಿ ದೇಶದ ಮಾರುಕಟ್ಟೆಯಲ್ಲಿನ ಬೆಲೆಗಳ ಮೇಲಿನ ಪರಿಣಾಮವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸರಕುಗಳ ಬೆಲೆ ಏರಿಕೆಯು ಎಷ್ಟರಮಟ್ಟಿಗೆ ದೇಶಿ ಮಾರುಕಟ್ಟೆಯ ಮೇಲೆ ವರ್ಗಾವಣೆ ಆಗುತ್ತದೆ ಎಂಬುದನ್ನು ಆಧರಿಸಿರಲಿದೆ ಎಂದು ಅವರು ಹೇಳಿದರು.

ಈ ವರ್ಷದಲ್ಲಿ ಡಿಸೆಂಬರ್‌ 3ರವರೆಗೆ ರೂಪಾಯಿ ಮೌಲ್ಯವು ಶೇ 5.1ರಷ್ಟು ಇಳಿಕೆ ಕಂಡಿದೆ ಎಂದು ಚೌಧರಿ ಮಾಹಿತಿ ನೀಡಿದರು. 2017ರ ನಂತರದಲ್ಲಿ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್‌ ಎದುರು ನಿರಂತರವಾಗಿ ಕುಸಿಯುತ್ತಿದೆ.

‘ರೂಪಾಯಿಯ ಮೌಲ್ಯವನ್ನು ಮಾರುಕಟ್ಟೆ ತೀರ್ಮಾನಿಸುತ್ತದೆ. ವಿದೇಶಿ ವಿನಿಮಯ ಮಾರುಕಟ್ಟೆಯ ಮೇಲೆ ಆರ್‌ಬಿಐ ಕಾಲಕಾಲಕ್ಕೆ ನಿಗಾ ಇರಿಸುತ್ತದೆ, ಅನಿಶ್ಚಿತತೆ ಅತಿಯಾಗಿದ್ದರೆ ಮಧ್ಯಪ್ರವೇಶ ಮಾಡುತ್ತದೆ. ಡಾ;ರ್‌–ರೂಪಾಯಿ ವಿನಿಮಯ ದರದ ಮೇಲೆ ‍ಪರಿಣಾಮ ಉಂಟುಮಾಡುವ ಸಂಗತಿಗಳ ಮೇಲೆ ನಿಗಾ ಇರಿಸುತ್ತದೆ’ ಎಂದು ಸಚಿವರು ವಿವರಿಸಿದರು.

ಇನ್ನಷ್ಟು ಇಳಿಕೆ?:

ರೂಪಾಯಿ ಮೌಲ್ಯವು ಅಮೆರಿಕದ ಡಾಲರ್‌ ಎದುರು ಇದೇ ತಿಂಗಳಲ್ಲಿ 92ರ ಮಟ್ಟಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.