ADVERTISEMENT

ಭಾರತಕ್ಕೆ ಕಚ್ಚಾತೈಲ ಪೂರೈಕೆ: ಸೌದಿ ಅರೇಬಿಯಾ ಜತೆ ರಷ್ಯಾ ಪೈಪೋಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಆಗಸ್ಟ್ 2022, 4:25 IST
Last Updated 6 ಆಗಸ್ಟ್ 2022, 4:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತಕ್ಕೆ ಕಚ್ಚಾ ತೈಲ ಪೂರೈಸುವ ವಿಚಾರದಲ್ಲಿ ಪೆಟ್ರೋಲಿಯಂ ರಫ್ತುದಾರ ರಾಷ್ಟ್ರಗಳ ಒಕ್ಕೂಟ (ಒಪೆಕ್) ಮತ್ತು ಆ ಒಕ್ಕೂಟದ ಮಿತ್ರರಾಷ್ಟ್ರ ಸೌದಿ ಅರೇಬಿಯಾಗೆ ರಷ್ಯಾ ತೀವ್ರ ಪೈಪೋಟಿ ನೀಡಲಾರಂಭಿಸಿದೆ.

ಏಪ್ರಿಲ್ – ಜೂನ್ ಅವಧಿಯಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲ ದರ ಸೌದಿ ಅರೇಬಿಯಾಕ್ಕಿಂತಲೂ ರಷ್ಯಾದ್ದು ಕಡಿಮೆ ಇತ್ತು. ಮೇ ತಿಂಗಳಲ್ಲಿ ರಷ್ಯಾವು ಬ್ಯಾರಲ್‌ಗೆ ಸುಮಾರು 19 ಡಾಲರ್ ರಿಯಾಯಿತಿ ಘೋಷಿಸಿತ್ತು ಎಂದು ಕೇಂದ್ರ ಸರ್ಕಾರದ ಅಂಕಿಅಂಶಗಳನ್ನು ಉಲ್ಲೇಖಿಸಿ ‘ಬ್ಲೂಮ್‌ಬರ್ಗ್’ ತಾಣ ವರದಿ ಮಾಡಿದೆ.

ಭಾರತಕ್ಕೆ ಅತಿಹೆಚ್ಚು ಕಚ್ಚಾ ತೈಲ ಪೂರೈಕೆ ಮಾಡುವ ರಾಷ್ಟ್ರಗಳ ಯಾದಿಯಲ್ಲಿ ಜೂನ್ ತಿಂಗಳಲ್ಲಿ ಸೌದಿ ಅರೇಬಿಯಾವನ್ನು ಹಿಂದಿಕ್ಕಿದ್ದ ರಷ್ಯಾ, ಎರಡನೇ ಸ್ಥಾನಕ್ಕೆ ಏರಿತ್ತು. ಇರಾಕ್ ಮೊದಲನೇ ಸ್ಥಾನದಲ್ಲಿದೆ.

ಉಕ್ರೇನ್‌ ಬಿಕ್ಕಟ್ಟು ಆರಂಭವಾದ ಬಳಿಕ ಹೆಚ್ಚಿನ ಖರೀದಿದಾರರು ರಷ್ಯಾದಿಂದ ದೂರ ಉಳಿದಿದ್ದು, ಭಾರತ ಮತ್ತು ಚೀನಾ ಹೆಚ್ಚಿನ ಕಚ್ಚಾ ತೈಲ ಖರೀದಿಗೆ ಮುಂದಾಗಿವೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ದೇಶದ ಕಚ್ಚಾ ತೈಲ ಆಮದು 47.5 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 25.1 ಶತಕೋಟಿ ಡಾಲರ್ ಇತ್ತು ಎಂದು ವರದಿ ಉಲ್ಲೇಖಿಸಿದೆ.

ಭಾರತದ ಸಂಸ್ಕರಣಾ ಘಟಕಗಳು ಆದಷ್ಟು ಕಡಿಮೆ ಬೆಲೆಗೆ ಕಚ್ಚಾ ತೈಲ ಖರೀದಿಸಲು ಪ್ರಯತ್ನಿಸುತ್ತಿವೆ ಎಂದು ಸಿಂಗಪುರದ ‘ವಂದಾ ಇನ್‌ಸೈಟ್ಸ್’ನ ಸ್ಥಾಪಕಿ ವಂದನಾ ಹರಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ಜೂನ್‌ನಲ್ಲಿ ಸೌದಿ ಅರೇಬಿಯಾದ ಕಚ್ಚಾ ತೈಲದ ದರಕ್ಕೆ ಹೋಲಿಸಿದರೆ ರಷ್ಯಾ ನೀಡಿರುವ ರಿಯಾಯಿತಿ ತುಸು ಕಡಿಮೆ ಇದೆ. ಆದರೂ ಸೌದಿ ಅರೇಬಿಯಾದ ದರಕ್ಕಿಂತ ಸುಮಾರು 13 ಡಾಲರ್‌ನಷ್ಟು ಕಡಿಮೆ ಇದ್ದು, ಸರಾಸರಿ 102 ಡಾಲರ್‌ನಷ್ಟಿದೆ. ಆದಾಗ್ಯೂ, ಭಾರತದ ತಿಂಗಳ ಪೂರೈಕೆಗೆ ಸಂಬಂಧಿಸಿದ ಒಪ್ಪಂದ ಫೆಬ್ರುವರಿಗೂ ಮೊದಲೇ ಆಗಿತ್ತು ಎಂದು ವರದಿ ಹೇಳಿದೆ.

ಭಾರತದ ತೈಲ ಕಂಪನಿಗಳು ಮೇ ತಿಂಗಳಿನಲ್ಲಿ ಕೂಡ ರಷ್ಯಾದಿಂದ 2.5 ಲಕ್ಷ ಬ್ಯಾರಲ್‌ ತೈಲ ಆಮದು ಮಾಡಿಕೊಂಡಿದ್ದವು. ಮೇನಲ್ಲಿ ಭಾರತವು ಆಮದು ಮಾಡಿಕೊಂಡಿರುವ ಒಟ್ಟಾರೆ ತೈಲದಲ್ಲಿ ಇದರ ಪಾಲು ಶೇಕಡ 16ರಷ್ಟು ಆಗಿತ್ತು.

ರಷ್ಯಾವು ಉಕ್ರೇನ್‌ ಮೇಲೆ ಸಮರ ಸಾರಿದ ನಂತರ ರಷ್ಯಾದ ಯೂರಲ್ಸ್ ಕಚ್ಚಾ ತೈಲ ಖರೀದಿಸುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಕೆಲವು ದೇಶಗಳು ಮತ್ತು ಕಂಪನಿಗಳು ರಷ್ಯಾದಿಂದ ತೈಲ ಖರೀದಿಸದಿರಲು ನಿರ್ಧರಿಸಿವೆ. ಇದರಿಂದಾಗಿ ರಷ್ಯಾದ ತೈಲ ರಫ್ತು ಕಡಿಮೆ ಆಗಿದ್ದು, ತೈಲದ ಬೆಲೆಯೂ ಇಳಿಕೆ ಕಂಡಿದೆ. ಭಾರತದ ಕಂಪನಿಗಳು ಇದರ ಪ್ರಯೋಜನ ಪಡೆದುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.