
ನವದೆಹಲಿ: ದುಬೈನಲ್ಲಿ ಕಳೆದ ವಾರ ನಡೆದ ಏರ್‌ಶೋ ಸಂದರ್ಭದಲ್ಲಿ ತೇಜಸ್ ಯುದ್ಧವಿಮಾನ ಪತನಗೊಂಡಿತ್ತು. ಇದರ ಬೆನ್ನಲ್ಲೇ ಯುದ್ಧ ವಿಮಾನ ತಯಾರಿಕಾ ಕಂಪನಿ ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (HAL) ಷೇರುಗಳ ಬೆಲೆಯೂ ಸೋಮವಾರ ಕುಸಿತದೊಂದಿಗೆ ವಹಿವಾಟು ಆರಂಭಿಸಿದೆ.
ಮುಂಬೈ ಷೇರು ಸೂಚ್ಯಂಕ (BSE) ದಿನದ ವಹಿವಾಟು ಆರಂಭಿಸುತ್ತಿದ್ದಂತೆ ಎಚ್‌ಎಎಲ್ ಷೇರುಗಳ ಬೆಲೆ ಶೇ 8.48ರಷ್ಟು (ಪ್ರತಿ ಷೇರುಗಳ ಬೆಲೆ ₹4,205.25) ಕುಸಿಯಿತು. ಆರಂಭಿಕ ನಷ್ಟದ ನಂತರ ತುಸು ಚೇತರಿಕೆ ಕಂಡ ಇದು, ನಂತರ ₹4,433ಕ್ಕೆ ತಲುಪಿತು.
ರಾಷ್ಟ್ರೀಯ ಷೇರು ಸೂಚ್ಯಂಕದಲ್ಲೂ (NSE) ಎಚ್ಎಎಲ್ ಷೇರುಗಳ ಬೆಲೆ ಶೇ 4.13ರಷ್ಟು ಇಳಿಕೆ ದಾಖಲಿಸಿದೆ.
ದುಬೈ ಏರ್‌ಶೋನಲ್ಲಿ ಆಗಸದಲ್ಲಿ ಕಸರತ್ತು ನಡೆಸುತ್ತಿದ್ದ ತೇಜಸ್ ಯುದ್ಧ ವಿಮಾನ ಪತನಗೊಂಡಿತ್ತು. ಅದರಲ್ಲಿದ್ದ ಪೈಲಟ್ ನಮಾಂಶ್ ಸ್ಯಾಲ್ ಅವರ ಅಸುನೀಗಿದರು. ‘ಭಾರತೀಯ ವಾಯು ಸೇನೆಯ ಧೈರ್ಯಶಾಲಿ ಪೈಲಟ್‌ರನ್ನು ಕಳೆದುಕೊಂಡಿದ್ದೇವೆ’ ಎಂದು ಎಚ್‌ಎಎಲ್ ತನ್ನ ಶೋಕ ವ್ಯಕ್ತಪಡಿಸಿತ್ತು.
ಕಳೆದ 20 ತಿಂಗಳಲ್ಲಿ ಪತನಗೊಂಡ ಎರಡನೇ ತೇಜಸ್ ಯುದ್ಧ ವಿಮಾನ ಇದಾಗಿದೆ. ದುಬೈ ಏರ್‌ಶೋಗೂ ಪೂರ್ವದಲ್ಲಿ 2024ರ ಮಾರ್ಚ್‌ನಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ವಿಮಾನ ಪತನಗೊಂಡಿತ್ತು. ಅದರಲ್ಲಿ ತುರ್ತು ಜಿಗಿತದ ಮೂಲಕ ಪೈಲಟ್ ಬದುಕುಳಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.