ADVERTISEMENT

ಬ್ಯಾಂಕಿಂಗ್ ವಂಚನೆ ಹೆಚ್ಚಳ: ಆರ್‌ಬಿಐ ವರದಿ

2019–20ನೇ ಹಣಕಾಸು ವರ್ಷದ ಮೊದಲಾರ್ಧ

ಪಿಟಿಐ
Published 28 ಡಿಸೆಂಬರ್ 2019, 19:45 IST
Last Updated 28 ಡಿಸೆಂಬರ್ 2019, 19:45 IST
   

ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಬ್ಯಾಂಕಿಂಗ್‌ ವಂಚನೆಯ ಮೊತ್ತ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 1.13 ಲಕ್ಷ ಕೋಟಿಗೆ ತಲುಪಿದೆ ಎಂದು ಆರ್‌ಬಿಐ ತಿಳಿಸಿದೆ.

2018–19ರಲ್ಲಿ ₹ 71,543 ಕೋಟಿ ಮೊತ್ತದ ವಂಚನೆ ನಡೆದಿತ್ತು.

ವಂಚನೆ ನಡೆದಿರುವುದನ್ನು ಪತ್ತೆಹಚ್ಚುವಲ್ಲಿ ತಡವಾಗುತ್ತಿದೆ. ವಂಚನೆ ನಡೆದ ವರ್ಷ ಬ್ಯಾಂಕ್‌ಗಳು ಅದನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಂತರದ ವರ್ಷದಲ್ಲಿ ವಂಚನೆಯ ಮೊತ್ತವನ್ನು ಸೇರಿಸಲಾಗುತ್ತಿದೆ. ಇದರಿಂದಾಗಿಯೆ ವಂಚನೆ ಮೊತ್ತದಲ್ಲಿ ಗರಿಷ್ಠ ಏರಿಕೆ ಕಂಡಿದೆ ಎಂದು ಆರ್‌ಬಿಐ ವರದಿಯಲ್ಲಿ ತಿಳಿಸಿದೆ.

ADVERTISEMENT

2019–20ರ ಮೊದಲಾರ್ಧದಲ್ಲಿ ವರದಿಯಾಗಿರುವ ಶೇ 97.3ರಷ್ಟು ವಂಚನೆಗಳು 2018–19ನೇ ಹಣಕಾಸು ವರ್ಷದಲ್ಲಿ ನಡೆದಿರುವುದಾಗಿವೆ ಎಂದು ಹೇಳಿದೆ.

ವಂಚನೆಗಳನ್ನು ಸಕಾಲಕ್ಕೆ ಪತ್ತೆ ಮಾಡಿ ಆರ್‌ಬಿಐಗೆ ವರದಿ ಮಾಡುವುದು ಹಾಗೂ ಸಾರ್ವಜನಿಕವಾಗಿ ಘೋಷಿಸುವ ಸಂಬಂಧ ಸ್ಪಷ್ಟವಾದ ಮಾರ್ಗದರ್ಶಿ ಸೂತ್ರಗಳನ್ನೂ ರೂಪಿಸಲು ಬ್ಯಾಂಕ್‌ಗಳಿಂದ ಪ್ರತಿಕ್ರಿಯೆ ಕೇಳಲಾಗಿದೆ ಎಂದೂ ಹೇಳಿದೆ.

ವಸೂಲಾಗದ ಸಾಲ ಹೆಚ್ಚಾಗಬಹುದು
ಮಂದಗತಿಯ ಆರ್ಥಿಕ ಸ್ಥಿತಿ, ಸಾಲ ನೀಡಿಕೆಯಲ್ಲಿ ಇಳಿಕೆಯಂತಹ ಬೆಳವಣಿಗೆಗಳಿಂದಾಗಿ ಬ್ಯಾಂಕ್‌ಗಳ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣದಲ್ಲಿ ಏರಿಕೆ ಆಗಬಹುದು ಎಂದು ಆರ್‌ಬಿಐ ಹೇಳಿದೆ.

2019ರ ಸೆಪ್ಟೆಂಬರ್‌ನಲ್ಲಿ ಸರಾಸರಿ ಎನ್‌ಪಿಎ ಶೇ 9.3ರಷ್ಟಿದ್ದು, ಅದು 2020ರ ಸೆಪ್ಟೆಂಬರ್‌ಗೆ ಶೇ 9.9ಕ್ಕೆ ಏರಿಕೆಯಾಗಬಹುದು ಎಂದಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಸರಾಸರಿ ಎನ್‌ಪಿಎ ಶೇ 12.7 ರಿಂದ ಶೇ 13.2ಕ್ಕೆ ಏರಿಕೆಯಾಗಬಹುದು. ಹಾಗೆಯೇ ಖಾಸಗಿ ವಲಯದ ಬ್ಯಾಂಕ್‌ಗಳ ಸರಾಸರಿ ಎನ್‌ಪಿಎ ಸಹ ಶೇ 2.9 ರಿಂದ ಶೇ 4.2ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ವಂಚನೆಯ ಸ್ವರೂಪ

97% -2019–20ರ ಮೊದಲಾರ್ಧದಲ್ಲಿಒಟ್ಟಾರೆ ವಂಚನೆಯಲ್ಲಿ ಸಾಲಕ್ಕೆ ಸಂಬಂಧಿಸಿದ ವಂಚನೆಗಳ ಪ್ರಮಾಣ

90%-2018–19ರಲ್ಲಿ ಒಟ್ಟಾರೆ ವಂಚನೆಯಲ್ಲಿ ಸಾಲಕ್ಕೆ ಸಂಬಂಧಿಸಿದ ವಂಚನೆಗಳ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.