ನವದೆಹಲಿ: ಅಮೆರಿಕ ವಿಧಿಸಿರುವ ಶೇ 26ರಷ್ಟು ಪ್ರತಿ ಸುಂಕದಿಂದ ಸಂಪೂರ್ಣ ವಿನಾಯಿತಿ ಪಡೆಯಲು ಭಾರತ ಮುಂದಾಗಿದೆ. ಹಾಗಾಗಿ, ಉಭಯ ದೇಶಗಳ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವು ಜುಲೈ 8ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏಪ್ರಿಲ್ 2ರಂದು ಅಮೆರಿಕವು ಪ್ರತಿ ಸುಂಕ ಹೇರಿತ್ತು. ಇದಕ್ಕೆ 90 ದಿನಗಳ ವಿರಾಮ ಘೋಷಿಸಿದ್ದು, ಈ ಆದೇಶವು ಜುಲೈ 9ರ ವರೆಗೆ ಜಾರಿಯಲ್ಲಿ ಇರಲಿದೆ. ಆದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ವಿಧಿಸಿರುವ ಶೇ 10ರಷ್ಟು ಮೂಲ ಸುಂಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಭಾರತದಿಂದ ಅಲ್ಲಿಗೆ ರಫ್ತಾಗುವ ಸರಕುಗಳಿಗೆ ಈ ಸುಂಕ ಅನ್ವಯಿಸಲಿದೆ ಎಂದು ಹೇಳಿದ್ದಾರೆ.
ಸರ್ಕಾರವು ಕೃಷಿ ಮತ್ತು ಹೈನುಗಾರಿಕೆ ವಲಯಗಳ ಹಿತಾಸಕ್ತಿ ಕಾಯ್ದುಕೊಳ್ಳಲು ಮುಂದಾಗಿದೆ. ಹಾಗಾಗಿ, ಅಲ್ಲಿಂದ ಆಮದಾಗುವ ಈ ವಲಯದ ಸರಕುಗಳಿಗೆ ಕೋಟಾ ಮಿತಿ ನಿಗದಿಪಡಿಸುವ ಸಾಧ್ಯತೆಯಿದೆ ಅಥವಾ ಕನಿಷ್ಠ ಆಮದು ದರ ನಿಗದಿಪಡಿಸಬಹುದು ಎಂದು ಹೇಳಿದ್ದಾರೆ.
ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಕುರಿತ ಮಾತುಕತೆಯು ಸಕಾರಾತ್ಮಕವಾಗಿ ನಡೆಯುತ್ತಿದೆ. ಸುಂಕಯೇತರ ಅಡೆತಡೆಗಳ ನಿವಾರಣೆ ಬಗ್ಗೆ ಚರ್ಚಿಸಲಾಗುತ್ತಿದೆ. ದೇಶದ ಸರಕುಗಳನ್ನು ಪ್ರತಿ ಸುಂಕ ಹಾಗೂ ಮೂಲ ಸುಂಕದ ಪರಿಧಿಯಿಂದ ಹೊರಗಿಡುವ ಬಗ್ಗೆ ಒಪ್ಪಂದವನ್ನು ಅಂತಿಮಗೊಳಿಸುವ ಕುರಿತು ಭಾರತವು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಅತ್ಯಂತ ವಿಶ್ವಾಸಾರ್ಹ ರಾಷ್ಟ್ರಗಳ ಮೇಲಿನ ಸುಂಕ ಕಡಿತಗೊಳಿಸುವ ಬಗ್ಗೆ ಅಧಿಕೃತವಾಗಿ ಅಲ್ಲಿನ ಸಂಸತ್‌ನಿಂದ ಅನುಮೋದನೆ ಪಡೆಯಬೇಕಿದೆ. ಆದರೆ, ಭಾರತ ಸೇರಿ ಹಲವು ರಾಷ್ಟ್ರಗಳ ಮೇಲೆ ವಿಧಿಸಿರುವ ಪ್ರತಿ ಸುಂಕವನ್ನು ಹಿಂಪಡೆಯಲು ಟ್ರಂಪ್ ಸರ್ಕಾರವು ಅಧಿಕಾರ ಹೊಂದಿದೆ.
ಯಾವ ಸರಕುಗಳಿಗೆ ವಿನಾಯಿತಿ?
ಭಾರತವು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದಲ್ಲಿ ಜವಳಿ ಹರಳು ಮತ್ತು ಚಿನ್ನಾಭರಣ ಚರ್ಮ ಉತ್ಪನ್ನ ಸಿದ್ಧಉಡುಪು ಪ್ಲಾಸ್ಟಿಕ್ ಕೆಮಿಕಲ್ಸ್ ಸಿಗಡಿ ಎಣ್ಣೆಕಾಳು ದ್ರಾಕ್ಷಿ ಮತ್ತು ಬಾಳೆಹಣ್ಣಿನ ಮೇಲೆ ಸುಂಕ ವಿನಾಯಿತಿ ಕೋರಿಕೆ ಮಂಡಿಸುವ ಸಾಧ್ಯತೆಯಿದೆ. ಅಮೆರಿಕವು ಕೈಗಾರಿಕಾ ಸರಕು ಆಟೊಮೊಬೈಲ್ (ವಿದ್ಯುತ್‌ಚಾಲಿತ ವಾಹನ) ವೈನ್ ಪೆಟ್ರೊಕೆಮಿಕಲ್ಸ್ ಸರಕು ಹೈನು ಉತ್ಪನ್ನ ಸೇಬು ಒಣ ಹಣ್ಣುಗಳು ಹಾಗೂ ಕುಲಾಂತರಿ ತಳಿಯ ಆಹಾರ ಉತ್ಪನ್ನಗಳ ಮೇಲೆ ಸುಂಕ ವಿನಾಯಿತಿ ಪ್ರಸ್ತಾವ ಮಂಡಿಸುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.